ಕನ್ನಡ ಚಿತ್ರ ರಂಗಕ್ಕೆ ವಿದಾಯ ಹೇಳಿ ತನ್ನ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದ್ದ ಚಿತ್ರ ನಟಿ ರಮ್ಯಾ, ನಿರ್ಮಾಪಕರ ಸಂಘದ ವರ್ಷಾವಧಿ ಬಹಿಷ್ಕಾರ ಮತ್ತು ಕ್ಷಮೆ ಕೋರಬೇಕೆಂಬ ಫರ್ಮಾನಿಗೆ ಕ್ಯಾರೆ ಎನ್ನಲಿಲ್ಲ.
ಬುಧವಾರ ಬೆಳಿಗ್ಗೆ ಚಿತ್ರ ನಿರ್ಮಾಕರ ಉದ್ಧಟತನಕ್ಕೆ ಸಡ್ಡು ಹೊಡೆಯುವ ನಿರ್ಧಾರ ಕೈಗೊಂಡು ಒಳ್ಳೆಯ ಚಿತ್ರಕತೆ, ಒಳ್ಳೆ ನಿರ್ದೇಶಕರಿಂದ ಆಫರ್ ಬಂದರೆ ಕನ್ನಡ ಚಿತ್ರದಲ್ಲಿ ನಟಿಸಲು ತಾನು ಸಿದ್ಧ ಎಂದು ಘೋಷಿಸುವ ಮೂಲಕ ತನ್ನ ತುಂಟತನವನ್ನು ಮತ್ತೆ ಪ್ರದರ್ಶಿಸಿ ಅಭಿಮಾನಿಗಳ ಮನಸ್ಸಿಗೆ ಮುದ ನೀಡಿದ್ದಾರೆ.
ತನ್ನ ಲಕ್ಷಗಟ್ಟಲೆ ಅಭಿಮಾನಿಗಳ ಒತ್ತಾಯ ಹಾಗೂ ಆಗ್ರಹದ ಮೇರೆಗೆ ನಟಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿಯೂ ಅವರು ಟಿ.ವಿ. ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡರು.
ಏನೂ ತಪ್ಪು ಮಾಡದ ನನ್ನನ್ನು, ನಿರ್ಮಾಪಕರಿಗೆ ಹಣಕಾಸಿನ ಸಹಾಯ ಮಾಡಿದ ನನ್ನನ್ನು ನಿರ್ಮಾಪಕರು ಬಹಿಷ್ಕರಿಸಿದ್ದು ಯಾಕೆ ಎಂದು ರಮ್ಯಾ ತನ್ನ ಹಿಂದೆಂದಿನ ತುಂಟತನವನ್ನು ಬಿಟ್ಟುಕೊಡದೆ ಪಟ್ಟು ಹಿಡಿದು ಪ್ರಶ್ನಿಸಿದರು.