ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನನಗೆ ಮಗು ಇದ್ದಿದ್ರೆ ನಾನೂ ಪ್ರಮಾಣ ಮಾಡುತ್ತಿದ್ದೆ! ರಮ್ಯಾ ವಾಗ್ದಾಳಿ (Dandam Dashagunam | Ramya | A.Ganesh | KFCC)
PR
ನಿರ್ಮಾಪಕ ಗಣೇಶ್ ಮತ್ತು ನಟಿ ರಮ್ಯಾ ವಿವಾದ ಬೀದಿರಂಪವಾಗಿ ಅದು ಬೇರೆ-ಬೇರೆ ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ಸುದ್ದಿವಾಹಿನಿಯೊಂದರಲ್ಲಿ ಕಾಣಿಸಿಕೊಂಡ ರಮ್ಯಾ, ನಿರ್ಮಾಪಕ ಎ.ಗಣೇಶ್ ಅವರೊಂದಿಗೆ ದೂರವಾಣಿಯಲ್ಲಿ ತುಂಬಾ ಸೊಗಸಾಗಿ ಜಗಳ ಆಡಿದ್ದರು.

ವಿವಾದ ಇತ್ಯರ್ಥಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರಣ ಗೊತ್ತಾಗುವ ನಿಟ್ಟಿನಲ್ಲಿ ಇಬ್ಬರ ನೇರ ಮಾತುಕತೆ ನಡೆಯಿತಾದರೂ ಕೆಲವೇ ಕ್ಷಣಗಳಲ್ಲಿ ಇಬ್ಬರ ಮಾತಿನ ಧಾಟಿಗಳೂ ಬದಲಾದವು.

ರಮ್ಯಾ ಅವರಿಗೆ ಕೊಡಬೇಕಾದ ಹತ್ತು ಲಕ್ಷ ಹಣದಲ್ಲಿ ಇನ್ನು ಕೊಡಬೇಕಿರುವುದು ಬರೇ ನಾಲ್ಕು ಲಕ್ಷ ಮಾತ್ರ ಎಂದು ಎ.ಗಣೇಶ್ ಅವರು ವಾದಿಸುತ್ತಿದ್ದರೆ, ಅವರ ಮಾತನ್ನು ಅಲ್ಲಗಳೆದ ರಮ್ಯಾ ನೀವು ನನ್ನಿಂದ ಪಡೆದ ಹತ್ತು ಲಕ್ಷ ಸಾಲದಲ್ಲಿ ಒಂದು ಲಕ್ಷ ಮಾತ್ರ ಹಿಂತಿರುಗಿಸಿದ್ದೀರಿ. ಇನ್ನು ಕೊಡಬೇಕಿರುವುದು ಒಂಬತ್ತು ಲಕ್ಷ ಎಂದು ವಾದಿಸಿದ್ದರು. ಹಾಗೂ ನೀವು ಹೆಚ್ಚಿನ ಹಣವನ್ನು ಹಿಂತಿರುಗಿಸಿರುವುದಾದರೆ ಅದಕ್ಕೆ ಪುರಾವೆಗಳನ್ನು ಒದಗಿಸಿ ಎಂದರು.

ರಮ್ಯಾ ಅವರು ಥೇಟ್ ವಕೀಲರಂತೆ ಎಲ್ಲದಕ್ಕೂ ಸಾಕ್ಷಾಧಾರ ಕೇಳುತ್ತಿದ್ದರೆ, ನಿರ್ಮಾಪಕ ಗಣೇಶ್ ಅವರು ತಂದೆ-ತಾಯಿ ಮತ್ತು ಮಕ್ಕಳ ಮೇಲೆಲ್ಲಾ ಪ್ರಮಾಣ ಮಾಡಿ ವಾದಿಸುತ್ತಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ 'ನನಗೆ ಮದುವೆ ಆಗಿಲ್ಲ, ನನಗೆ ಮಗು ಆಗಿದ್ರೆ ಅವರ ಮೇಲೆ ಪ್ರಮಾಣ ಮಾಡ್ತಿದ್ದೆ' ಎಂದು ಉತ್ತರಿಸಿದರು.

ವಿಶೇಷವೆಂದರೆ ರಮ್ಯಾ ಅವರ ಅಚ್ಚಕನ್ನಡ! ಬರೇ ಇಂಗ್ಲೀಷ್ ಮಾತ್ರ ಮಾತಾಡ್ತಾರೆ, ಕನ್ನಡ ಸರಿಯಾಗಿ ಬರುವುದಿಲ್ಲ ಅಂದುಕೊಂಡಿದ್ದ ಅವರ ಅಭಿಮಾನಿಗಳ ಊಹೆಯನ್ನೇ ನಾಚಿಸುವಂತೆ ಥೇಟ್ ಹಳ್ಳಿಹುಡುಗಿಯರಂತೆ ಹಾವ-ಬಾವ-ರಾಗ ಸೇರಿಸಿ ಮಾತನಾಡಿದ್ದರು. ರಮ್ಯಾ ಮಾತಿಗೆ ಪ್ರತಿದಾಳಿ ನಡೆಸಿದ ನಿರ್ಮಾಪಕ ಎ.ಗಣೇಶ್ ಸಾಯಿಬಾಬ ಮೇಲೆಲ್ಲ ಸತ್ಯ ಮಾಡಿ ವಾದಿಸಿದ್ದರು.

ನಿರ್ಮಾಪಕ ಗಣೇಶ್ ಮತ್ತು ನಟಿ ರಮ್ಯಾ ಅವರಿಗೆ ಈ ಸಂಭಾಷಣೆ ಗಂಭೀರ ವಿಷಯವಾಗಿದ್ದರೂ, ರಮ್ಯಾ ಅವರ ಮಾತಿನ ಶೈಲಿ ಮತ್ತು ವರ್ತನೆ ಅವರ ಅಭಿಮಾನಿಗಳಲ್ಲಿ ಒಂದು ರೀತಿಯಲ್ಲಿ ಮನರಂಜನೆಯ ವಿಷಯವಾಗಿತ್ತು.

'ದಂಡಂ ದಶಗುಣಂ' ವಿವಾದದಿಂದ ಮನನೊಂದು ಇನ್ನು ಮುಂದೆ ಚಿತ್ರರಂಗಕ್ಕೆ ವಿದಾಯ ಹಾಡುವುದಾಗಿ ಹೇಳಿದ್ದ ರಮ್ಯಾ, ಒಳ್ಳೆಯ ಕಥೆ, ಪಾತ್ರ ಸಿಕ್ಕರೆ ಖಂಡಿತಾ ಚಿತ್ರದಲ್ಲಿ ನಟಿಸುವುದಾಗಿ ಇದೇ ವೇಳೆ ತನ್ನ ಅಭಿಮಾನಿಗಳಿಗೆ ತಿಳಿಸಿದರು.
ಇವನ್ನೂ ಓದಿ