ದಂಡಂ ದಶಗುಣಂ ಚಿತ್ರದ ವಿವಾದದಲ್ಲಿ ನಿರ್ಮಾಪಕ ಗಣೇಶ್ ಮತ್ತು ನಟಿ ರಮ್ಯಾ ನಡುವಿನ ಹಣಕಾಸಿನ ವ್ಯವಹಾರದಲ್ಲಿ ಮದ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ನಿರ್ಮಾಪಕ ಮುನಿರತ್ನ ಅವರು ರಮ್ಯಾ ಅವರ ನಿಲುವು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.
ನೀನು ನಟಿಸುವುದಾದರೆ ನಾನೇ ನಿನಗೆ ಚಿತ್ರಕೊಡ್ತೀನಮ್ಮಾ... ಅದಕ್ಕೆ ಯಾಕೆ ಚಿಂತೆ ಎಂದು ನಟಿ ರಮ್ಯಾಗೆ ಬೆಂಬಲ ನೀಡಿದ್ದಾರೆ ಮುನಿರತ್ನ. ನಿರ್ಮಾಪಕರ ಸಂಘ ಒಂದು ವರ್ಷಗಳ ಕಾಲ ನಟಿ ರಮ್ಯಾ ಅವರಿಗೆ ಯಾವುದೇ ಅವಕಾಶಗಳನ್ನು ಕೊಡಬಾರದು ಎಂದು ನಿರ್ದರಿಸಿರುವ ಬೆನ್ನಲ್ಲೇ ಮುನಿರತ್ನ ಅವರು ಹೇಳಿಕೆ ಕೊಟ್ಟಿರುವುದು ಚಿತ್ರರಂಗದಲ್ಲಿ ಕುತೂಹಲ ಕೆರಳಿಸಿದೆ
ಅದರಲ್ಲೂ ಮೊದಲಿಗೆ ನಿರ್ಮಾಪಕ ಎ.ಗಣೇಶ್‌ಗೆ ಸಹಾಯ ಮಾಡಿದ್ದ ಮುನಿರತ್ನ ಈಗ ಒಮ್ಮೆಲೆ ತಿರುಗಿ ಬಿದ್ದಿದ್ದಾರೆ. ಅಲ್ಲದೆ ವಾಣಿಜ್ಯ ಮಂಡಳಿಯೇ ಸರಿಯಿಲ್ಲ ಎಂದೂ ಅವರು ಆರೋಪಿಸಿದ್ದಾರೆ. ಗಣೇಶ್ ಅವರು ಕೊಡಬೇಕಿದ್ದ ಹಣವನ್ನು ವಾಪಾಸು ಕೊಡಬೇಕಿತ್ತು. ವಿವಾದ ಇತ್ಯರ್ಥಕ್ಕೆ ಅಂಬರೀಷ್ ಅವರ ಸಹಾಯ ಪಡೆದಿದ್ದರೆ ಇಷ್ಟೆಲ್ಲಾ ತೊಂದರೆ ಆಗುತ್ತಿರಲಿಲ್ಲ ಎಂದರು.
ಮುಂದುವರಿದು ಚಲನ ಚಿತ್ರ ವಾಣಿಜ್ಯ ಮಂಡಳಿ ಏನೇನು ಕೆಲಸ ಮಾಡಿಲ್ಲ. ಇಂದು ಚಿತ್ರರಂಗದಿಂದ ಸರಕಾರದ ಬೊಕ್ಕಸಕ್ಕೆ ಎಷ್ಟೊಂದು ಹಣ ಸೇರುತ್ತಿದೆ. ಆ ನಿಟ್ಟಿನಲ್ಲಿ ಸರಕಾರದಿಂದ ಇವರು ಏನೇನು ಕೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಪೈರೆಸಿ ನಿಯಮ ಸೇರಿದಂತೆ ಹಲವಾರು ಬೇಡಿಕೆಗಳನ್ನು ಇವರು ಸರಕಾರದ ಮುಂದೆ ಇಡುತ್ತಿಲ್ಲ. ಅದೇ ನೆರೆಯ ರಾಜ್ಯಗಳಲ್ಲಿ ಈ ನಿಯಮ ಶಿಸ್ತಿನಿಂದ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.