ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂಭಾವನೆ ಬದ್ಲು ವಿತರಣೆ ಹಕ್ಕು: ಪೂಜಾ ಗಾಂಧಿಯೂ ರಾಜಿ! (Nee Illade | Pooja Gandhi | Shiva Ganapati | Kannada Film | Caveat)
WD
ಚಿತ್ರರಂಗದಲ್ಲಿನ ವಿವಾದಗಳ ಸುಳಿಗಳಲ್ಲಿ ರಮ್ಯಾ ಬಾಕಿ ಹಣ ಪ್ರಕರಣದ ನಡುವೆಯೇ ಎದ್ದಿದ್ದ, ನಟಿ ಪೂಜಾ ಗಾಂಧಿ ಹಾಗೂ ನಿರ್ದೇಶಕ ಶಿವಗಣಪತಿ ನಡುವಿನ ಮತ್ತೊಂದು ಬಿಸಿ ಬಿಸಿ ವಿವಾದವು ಕೂಡ ಗುರುವಾರ ಸಂಧಾನದಲ್ಲಿ ಮುಕ್ತಾಯ ಕಂಡಿದೆ.

'ನೀ ಇಲ್ಲದೆ' ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ನಡೆದ ಈ ಸಂಧಾನದಲ್ಲಿ ನಟಿ ಪೂಜಾ ಗಾಂಧಿಗೆ ಕೊಡಬೇಕಿರುವ ಬಾಕಿ ಹಣಕ್ಕೆ ಸಂಬಂಧಿಸಿ ಈ ರಾಜಿ ಏರ್ಪಟ್ಟಿದೆ. ಪೂಜಾ ಗಾಂಧಿಗೆ ಕರ್ನಾಟಕದ ಎರಡು ಪ್ರದೇಶಗಳಾದ ಹೈದರಾಬಾದ್ ಕರ್ನಾಟಕ ಮತ್ತು ಮಂಗಳೂರುಗಳಿಗೆ ಚಿತ್ರದ ಹಂಚಿಕೆಯ ಹಕ್ಕನ್ನು ಕೊಡಲಾಗುತ್ತದೆ. ಇದರಲ್ಲಿ 4 ಲಕ್ಷ ರೂಪಾಯಿಗಿಂತ ಹೆಚ್ಚು ಕಲೆಕ್ಷನ್ ಆದರೆ, ಹೆಚ್ಚುವರಿ ಹಣವನ್ನು ಪೂಜಾ ಗಾಂಧಿಯು ನಿರ್ಮಾಪಕರಿಗೆ ಕೊಡಬೇಕು. ಆದರೆ ವಿತರಣೆಯಲ್ಲೇನಾದರೂ ನಷ್ಟವಾದರೆ, ಆ ನಷ್ಟದ ಹೊಣೆಯನ್ನು ಪೂಜಾ ಗಾಂಧಿಯೇ ಹೊರಬೇಕು!

ಕಳೆದ ವರ್ಷ ಸೆಟ್ಟೇರಿದ್ದ 'ನೀ ಇಲ್ಲದೆ' ಚಿತ್ರಕ್ಕೆ ಬಿಡುಗಡೆ ಭಾಗ್ಯ ಲಭಿಸಿರಲಿಲ್ಲ. ಅದು ಈ ವಾರ ತೆರೆಕಾಣಲು ಸಿದ್ಧವಾದಾಗ, ಪೂಜಾ ಗಾಂಧಿಗೆ 5 ಲಕ್ಷ ರೂಪಾಯಿ ಬಾಕಿ ಹಣ ಸಂದಾಯವಾಗದಿರುವ ವಿವಾದದಿಂದಾಗಿ ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದಾಗಿ ಬಿಡುಗಡೆಗೆ ವಿಘ್ನ ಕಂಡು ಬಂದಿರುವುದರಿಂದ ಶಿವಗಣಪತಿ ಕೂಡ, ಚಿತ್ರದ ಬಿಡುಗಡೆಗೆ ಯಾವುದೇ ಅಡ್ಡಿ ಇರಬಾರದು ಎಂದು ಕೋರ್ಟಿಗೆ ಕೇವಿಯಟ್ ಅರ್ಜಿ ಸಲ್ಲಿಸಿದ್ದರು. ಇದೀಗ ರಾಜಿ ಸಂಧಾನದ ವಿವರಗಳನ್ನು ಉಭಯ ಅರ್ಜಿದಾರರು ಕೂಡ ಗುರುವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ವಿವಾದ ಬಗೆ ಹರಿದಿದೆ.

ರಘು ಮುಖರ್ಜಿ 'ನೀ ಇಲ್ಲದೆ' ಚಿತ್ರಕ್ಕೆ ನಾಯಕ. ಚಿತ್ರಕ್ಕೆ ನಿರ್ದೇಶಕ ಶಿವ ಗಣಪತಿ ಭರ್ಜರಿ ಪ್ರೇಮ ಕಥೆಯನ್ನೇ ಆರಿಸಿಕೊಂಡಿದ್ದಾರೆ. ದುಡ್ಡು ಹಾಕಿ ಚಿತ್ರ ನಿರ್ಮಿಸಿದವರು ಚನ್ನಪತಿ ನಾಗಮಲ್ಲೇಶ್ವರಿ. ಆದರೆ ತನಗೆ ಪೂರ್ತಿ ದುಡ್ಡು ಎಣಿಸಿಕೊಟ್ಟಿಲ್ಲ ಎನ್ನುವುದು ಪೂಜಾ ಗಾಂಧಿ ತಕರಾರು.

ಇದಕ್ಕೆ ಮೊದಲು, 'ನೀ ಇಲ್ಲದೆ' ನಿರ್ಮಾಪಕರು ಪೂಜಾ ಗಾಂಧಿಗೆ ಬಾಕಿ ಸಂಭಾವನೆಯ ಬದಲು ಚಿತ್ರದ ವಿತರಣಾ ಹಕ್ಕುಗಳನ್ನು ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದರಂತೆ. ಆದರೆ ಪೂಜಾ ಮಾತ್ರ ಅದಕ್ಕೆ ಒಪ್ಪಿರಲಿಲ್ಲ. 'ನನಗೆ ಬಾಕಿ ಹಣ ಕೊಡಿ ವಿತರಣೆ ಹಕ್ಕಿನ ಉಸಾಬರಿ ಬೇಡ' ಎಂದು ಅವರು ಪಟ್ಟು ಹಿಡಿದಿದ್ದರು.
ಇವನ್ನೂ ಓದಿ