ನಿರ್ಮಾಪಕ ಗಂಡುಗಲಿ ಕೆ.ಮಂಜು ಇದೀಗ 'ಹ್ಯಾಪಿ' ಆಗಿದ್ದಾರೆ. ಅದಕ್ಕೆ ಕಾರಣವೂ ಇದೆ. ಅವರ ನಿರ್ಮಾಣದ ಮೂರು ಚಿತ್ರಗಳು ಒಮ್ಮೆಲೆ ಬಿಡುಗಡೆಗೆ ಸಜ್ಜಾಗಿವೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಅಭಿನಯದ ಹಾಗೂ ಉದಯ್ ಪ್ರಕಾಶ್ ನಿರ್ದೇಶನದ 'ಹ್ಯಾಪಿ', ಮಮ್ಮುಟ್ಟಿ ಮತ್ತು ಆದಿತ್ಯ ಕಾಂಬಿನೇಶನ್ನ 'ಶಿಕಾರಿ' ಹಾಗೂ ಗುಳಿಕೆನ್ನೆ ಹುಡುಗ ದಿಗಂತ್ ಅಭಿನಯದ 'ಜಾಲಿ ಬಾಯ್' ಚಿತ್ರಗಳು ಈಗಾಗಲೇ ಪೂರ್ಣಗೊಂಡು ತೆರೆಗೆ ಅಪ್ಪಳಿಸಲು ಅಣಿಯಾಗಿವೆ.
ಇವುಗಳನ್ನು ತೆರೆಗೆ ತರಲು ತುದಿಗಾಲ ಮೇಲೆ ನಿಂತಿರುವ ಮಂಜು ಮತ್ತೆ ನಾಲ್ಕು ಅದ್ದೂರಿ ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅಲ್ಲಿಗೆ ಈ ವರ್ಷವೀಡೀ ವಸ್ತುಶಃ ಮಂಜು ಚಿತ್ರೋತ್ಸವವೇ ನಡೆಯಲಿದೆ.
ಮಂಜು ನಿರ್ಮಾಣದ ಚಿತ್ರಗಳು ಬಿಡುಗಡೆಗೆ ಸಜ್ಜಾಗಿರುವುದು ಒಂದೆಡೆಗಾದರೆ, ಹೊಸ ಚಿತ್ರಗಳನ್ನು ಸೆಟ್ಟೇರಿಸುವ ಧಾವಂತ ಮತ್ತೊಂದೆಡೆ. ಈ ಬಾರಿ ಮಂಜು ನಿರ್ಮಿಸಲಿರುವುದು ಬಲು ಅದ್ದೂರಿಯ ಚಿತ್ರಗಳನ್ನು.
ಈಗಾಗಲೆ ಬೆಳಕಿಗೆ ಬಂದಿರುವಂತೆ ಅವರು ತಮಿಳಿನ 'ಮೈನಾ' ಚಿತ್ರವನ್ನು ಗಣೇಶ್ಗಾಗಿ ನಿರ್ಮಿಸುತ್ತಿದ್ದಾರೆ. ಇದಲ್ಲದೆ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರಿಗೆ ತಲಾ ಒಂದೊಂದು ಚಿತ್ರವನ್ನು ನಿರ್ಮಿಸಲು ಹಾಗೂ ಮತ್ತೊಂದು ಚಿತ್ರವನ್ನು ತಯಾರಿಸಲು ತಯಾರಾಗಿದ್ದಾರೆ.
ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರಿಗೆ ತಯಾರಿಸಲಾಗುತ್ತಿರುವ ಚಿತ್ರಗಳ ಶೀರ್ಷಿಕೆ ಅಂತಿಮವಾಗಿಲ್ಲ. ಅವು ಸ್ವಮೇಕಾ ರೀಮೇಕಾ ಗೊತ್ತಾಗಿಲ್ಲ.
ನಿರ್ದೇಶಕಕರು ಯಾರು ಎಂಬುದೂ ಗೌಪ್ಯ. ಅಂತೆಯೇ ಕಲಾವಿದರು, ತಂತ್ರಜ್ಞರ ಆಯ್ಕೆ ಕೂಡಾ ಇನ್ನಷ್ಟೇ ನಡೆಯಬೇಕಿದೆ. ಈ ಪ್ರಶ್ನೆಗಳಿಗೆಲ್ಲಾ ಕಾದು ನೋಡಿ ಎಂದಷ್ಟೇ ಉತ್ತರಿಸುವ ಮಂಜು ಇನ್ನೆರಡು ದಿನಗಳಲ್ಲಿ ಯಾವ ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬುದನ್ನು ಪ್ರಕಟಿಸಲಿದ್ದಾರಂತೆ.