ಕುಡಿತ ಆ ಕ್ಷಣಕ್ಕೆ ಮಜಾ ಎನ್ನಿಸಬಹುದು. ಆದರೆ ಅದು ಯಾವಾಗಲೂ ಅಪಾಯ ಎಂಬುದನ್ನು ಮನವರಿಕೆ ಮಾಡಿಕೊಡುವ ಮಹಾನ್ ಸಂದೇಶವನ್ನು '90'ನೀಡಲಿದೆಯಂತೆ. ಬಾರ್ ಮುಂದಿನ ಘಟನಾವಳಿಗಳನ್ನು ನೈಜವೆನಿಸುವಂತೆ ಚಿತ್ರೀಕರಣ ನಡೆಸಲಾಗಿದೆಯಂತೆ.
ಕುಡಿತದ ತಮಾಷೆ ಪ್ರಸಂಗಗಳನ್ನು ಪ್ರಸ್ತುತ ಪಡಿಸುತ್ತಲೇ ಅದರ ವಿರುದ್ಧ ಜಾಗೃತಿ ಮೂಡಿಸಲು ಯತ್ನಿಸುವ ಚಿತ್ರ '90', ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣ ಪೂರೈಸಿದೆ. ಸಾಧು ಕೋಕಿಲ ಮುಖ್ಯ ಪಾತ್ರದಲ್ಲಿರುವ ಚಿತ್ರದ ಮುಖ್ಯ ಉದ್ದೇಶವೇ ಕುಡಿತದ ಚಟವನ್ನು ಬಿಡಿಸುವುದಂತೆ! ಹಾಗೆಂದು ಅವರೇ ಹೇಳಿಕೊಂಡಿದ್ದಾರೆ.
ಕುಡಿತದ ದುಷ್ಪರಿಣಾಮಗಳ ಕುರಿತು ಬೆಳಕು ಚೆಲ್ಲುವ ಸಲುವಾಗಿ ಅನೇಕ ಹಾಸ್ಯ ಪ್ರಸಂಗಗಳನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಹೆಣೆಯಲಾಗಿದೆ ಎಂದಿರುವ ಸಾಧು ಕೋಕಿಲ, ಕುಡಿತದ ವಿರುದ್ಧ ಜಾಗೃತಿ ಮೂಡಿಸುವ ಹಾಸ್ಯ ಪ್ರಸಂಗಗಳು ಪ್ರೇಕ್ಷಕನಿಗೆ ಖಂಡಿತಾ ಮಜಾ ನೀಡುತ್ತದೆ ಎಂದಿದ್ದಾರೆ.
ಕುಡಿತದ ದುಷ್ಪರಿಣಾಮಗಳನ್ನು ತಿಳಿಸಲು ತಮಾಷೆ ರೂಪದಲ್ಲಿ ತೋರಿಸುವುದು ಎಷ್ಟು ಸರಿ ಎಂಬುದು ಚಿತ್ರ ಬಿಡುಗಡೆಗೊಂಡ ಬಳಿಕವೇ ತಿಳೀದೀತು. '90' ಮೇ ತಿಂಗಳಲ್ಲಿ ಬಿಡುಗಡೆ ಕಾಣಲಿದೆ.