ಸ್ಯಾಂಡಲ್‌ವುಡ್ ನನ್ನನ್ನು ಅಪ್ರೋಚ್ ಮಾಡಿಲ್ಲ; ಐಶ್ವರ್ಯಾ ರೈ
PR
'ಐಶ್ವರ್ಯ ರೈ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವವರು. ಅವರು ನಮ್ಮ ಕೈಗೆ ಸಿಗುವವರಲ್ಲ. ಕನ್ನಡ ಚಿತ್ರದಲ್ಲಿ ನಟಿಸುತ್ತೀರಾ ಎಂದು ಅವರನ್ನು ಕೇಳುವುದು ವ್ಯರ್ಥ' ಎಂದು ಸ್ಯಾಂಡಲ್‌ವುಡ್ ನಿರ್ಮಾಪಕರು, ನಿರ್ದೇಶಕರು ಭಾವಿಸಿದ್ದರೆ ಅದು ತಪ್ಪು. ಈ ತಪ್ಪು ಕಲ್ಪನೆಯನ್ನು ಸ್ವಯಂ ಐಶ್ವರ್ಯ ರೈ ಅವರೇ ನಿವಾರಿಸಿ ಬಿಟ್ಟಿದ್ದಾರೆ.
'ಸಂಭಾವನೆಯ ಭಯ ಬೇಡ. ಒಳ್ಳೆಯ ಕಥೆಯೊಂದಿಗೆ ಬನ್ನಿ. ನಾನು ಕನ್ನಡ ಚಿತ್ರದಲ್ಲೂ ನಟಿಸುವೆ' ಎಂದು ಐಶ್ವರ್ಯ ರೈ ಸ್ಪಷ್ಟವಾಗಿ ತಿಳಿಸಿದ್ದಾರೆ.
'ನನಗೆ ಈ ತನಕವೂ ಕನ್ನಡ ಚಿತ್ರರಂಗದಿಂದ ಯಾವುದೇ ಆಫರ್ ಬಂದಿಲ್ಲ. ಕನ್ನಡ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ಆದರೆ ನನಗೆ ಪ್ರಶಸ್ತವಾದ ಆಫರ್ ಸಿಕ್ಕಿದರೆ ಖಂಡಿತಾ ನಟಿಸುವೆ. ನಾನು ಬಾಲಿವುಡ್ ನಟಿಯಾಗಿರುವುದರಿಂದ ದುಬಾರಿ ನಟಿ ಎಂದು ಕನ್ನಡ ಚಿತ್ರ ರಂಗದ ನಿರ್ಮಾಪಕರು ಮತ್ತು ನಿರ್ದೇಶಕರು ಎಣಿಸಿರಬಹುದು. ಹಾಗಾಗಿ ಕನ್ನಡ ಚಿತ್ರ ರಂಗದಿಂದ ಇದುವರೆಗೆ ಯಾರೂ ನನ್ನನ್ನು ಸಮೀಪಿಸಲೇ ಇಲ್ಲ. ಒಳ್ಳೆಯ ಕಥೆ ಇದೆಯೆಂದಾದರೆ ಕನ್ನಡ ಚಿತ್ರದಲ್ಲೂ ನಟಿಸಬೇಕೆಂಬ ಆಶೆ ನನಗಿದೆ' ಎಂದಿದ್ದಾರೆ ಐಶ್ವರ್ಯ.
'ನಾನು ಕನ್ನಡದ ಹುಡುಗಿ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಖುಷಿ, ಹೆಮ್ಮೆ ಎರಡೂ ಇವೆ. ನಾನು ಕನ್ನಡದ ಹುಡುಗಿಯೇ ಆದರೂ ಎಲ್ಲರೂ ನನ್ನನ್ನು ಮಂಗಳೂರಿನ ಐಶ್ವರ್ಯ ಎಂದೇ ಗುರುತಿಸುತ್ತಾರೆ. ಮಂಗಳೂರು ಇರುವುದು ಕನ್ನಡ ನೆಲದಲ್ಲೇ ಅಲ್ವಾ' ಎಂದು ಐಶ್ವರ್ಯಾ ರೈ 'ವಿಜಯ ಕರ್ನಾಟಕ' ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.