'ಅಕಸ್ಮಾತ್ ಓರ್ವ ನಟಿ ತಪ್ಪು ಮಾಡಿದರೆ ಅವಳು ಹೆಣ್ಣು ಎಂಬ ದೃಷ್ಟಿಯಲ್ಲಾದರೂ ಕ್ಷಮಿಸಿಬಿಡಿ. ಹೆಣ್ಣಿಗೆ ನೋವಾದರೆ ಯಾರಿಗೂ ಒಳ್ಳೆಯದಾಗೋಲ್ಲ. ರಮ್ಯಾ ಖಂಡಿತಾ ಕನ್ನಡ ದ್ರೋಹಿ ಅಲ್ಲ. ಆಕೆ ಪ್ರತಿಭಾವಂತೆ ಹಾಗೂ ಜನಪ್ರಿಯ ನಟಿ. ಕನ್ನಡಕ್ಕೆ ಸಾಕಷ್ಟು ದುಡಿದಿದ್ದಾರೆ. ಇಂಥವಳ ಕಣ್ಣೀರು ನೋಡಿ ನನಗೆ ಬಹಳ ನೋವಾಯಿತು' ಹೀಗೆಂದು ಹಿರಿಯ ಪಂಚಭಾಷಾ ನಟಿ ಭಾರತಿ ವಿಷ್ಣುವರ್ಧನ್ ನಟಿ ರಮ್ಯಾ ರಾದ್ದಾಂತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ರಮ್ಯಾ ನಿಜವಾಗಿಯೂ ತುಂಬಾ ಒಳ್ಳೆಯ ಹುಡುಗಿ. ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನೇರ ನಡೆ ನುಡಿಯವಳು. ಮೊನ್ನೆ ಟಿವಿಯಲ್ಲಿ ಆಕೆಯ ಸ್ಥಿತಿ ನೋಡಿ ನನಗೆ ತುಂಬಾ ನೋವಾಯಿತು. ಸಮಾಜದಲ್ಲಿ ಹೆಣ್ಣಿಗೆ ಪ್ರತ್ಯೇಕವಾದ ಸ್ಥಾನ ಇದೆ. ಅದಕ್ಕೆ ಗೌರವ ಕೊಡಬೇಕು. ಅವಹೇಳನ ಮಾಡಬಾರದು. ಆದರೆ ರಮ್ಯಾ ಮತ್ತು ಗಣೇಶ್ ನಡುವಣ ವಿವಾದ ಬೀದಿರಂಪ ಆಗಬಾರದಿತ್ತು' ಎಂದು ಭಾರತಿ ವಿಷ್ಣುವರ್ಧನ್ ನುಡಿದಿದ್ದಾರೆ.
'ನಮ್ಮ ಉದ್ಯಮದ ದುರಾದೃಷ್ಟವೋ ಎನೋ ಈಗ ಯಾರಿಗೂ ಸಿನಿಮಾ ಬಗ್ಗೆ ನಿಜವಾದ ಕಾಳಜಿ ಇಲ್ಲ. ಇಲ್ಲಿ ನಟಿಯರನ್ನು ನೋಡೋ ರೀತಿ, ನಡೆಸಿಕೊಳ್ಳುವ ರೀತಿಯನ್ನು ಜನ ಇಷ್ಟಪಡುತ್ತಿಲ್ಲ. ಹಿತ್ತಲ ಗಿಡ ಮದ್ದಲ್ಲ ಅನ್ನೋ ಹಾಗೆ ಕೆಲವರಿಗೆ ಸ್ಥಳೀಯ ಪ್ರತಿಭೆಗಳೇ ಬೇಕಾಗಿಲ್ಲ. ಮುಂಬೈ, ಚೆನ್ನೈನಿಂದ ಬಂದ ನಟಿಯರಿಗೆ ಹೆಚ್ಚಿನ ಗೌರವ ಕೊಡುತ್ತಾರೆ' ಎಂದೂ ಭಾರತಿ ವಿಷ್ಣುವರ್ಧನ್ ಟೀಕಿಸಿದ್ದಾರೆ.