'ಥ್ರೀ ಈಡಿಯಟ್ಸ್' ಕನ್ನಡ ರಿಮೇಕ್ನಲ್ಲಿ ಗಣೇಶ್ಗೆ ಕೊಕ್..?
PR
ಕನ್ನಡದಲ್ಲಿ 'ಥ್ರೀ ಈಡಿಯಟ್ಸ್' ಚಿತ್ರ ಮಾಡುವ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಚಿತ್ರದ ನಾಯಕನ ಆಯ್ಕೆಯ ವಿಷಯದಲ್ಲಿ ಕೊಂಚ ಗಲಿಬಿಲಿ. ಗೋಲ್ಡನ್ ಸ್ಟಾರ್ ಗಣೇಶ್ ಸಂಭಾವನೆ ಯಾಕೋ ನಿರ್ಮಾಪಕರಿಗೆ ಹೊರೆಯಾದಂತಿದೆ. ಅದಕ್ಕಾಗಿ ಬೇರೆ ನಾಯಕರ ಆಯ್ಕೆಗೆ ಬಲೆಬೀಸಿದ್ದಾರೆ ನಿರ್ಮಾಪಕ ಸನತ್ ಕುಮಾರ್.
ಈ ವದಂತಿ ಒಂದು ವರ್ಷದಿಂದಲೂ ಗಾಂಧಿನಗರದಲ್ಲಿ ಹರಿದಾಡುತ್ತಲೇ ಇತ್ತು. ಆದರೆ ಹಿಂದಿಯ ಭರ್ಜರಿ ಯಶಸ್ಸಿನ ಈ ಚಿತ್ರವನ್ನು ಯಾರು ಕನ್ನಡಕ್ಕೆ ತರುತ್ತಾರೆ ಎನ್ನುವುದು ಖಚಿತವಾಗಿರಲಿಲ್ಲ. 'ಥ್ರೀ ಈಡಿಯಟ್ಸ್' ಹಿಂದಿ ಚಿತ್ರದಲ್ಲಿ ಅಮೀರ್ ಖಾನ್ ನಿರ್ವಹಿಸಿದ್ದ ಪಾತ್ರವನ್ನು ಗಣೇಶ್ ಮಾಡುತ್ತಾರೆ ಎಂಬ ಮಾತೂ ಕೇಳಿ ಬಂದಿತ್ತು. ಕೊನೆಗೂ ಈ ಚಿತ್ರ ಕನ್ನಡದಲ್ಲಿ ಬರುವ ಸಾಧ್ಯತೆ ಈಗ ಹೆಚ್ಚಿದೆ.
ಹಿಂದಿಯ 'ಥ್ರೀ ಈಡಿಯಟ್ಸ್' ಚಿತ್ರದ ಹಕ್ಕನ್ನು ಜೆಮಿನಿ ಫಿಲಂ ಖರೀದಿದ್ದು, ನಿರ್ಮಾಪಕ ಕಮ್ ಪತ್ರಕರ್ತ ಸನತ್ ಕುಮಾರ್ ಅವರು ಜೆಮಿನಿ ಜತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಸೂಕ್ತ ನಿರ್ದೇಶಕ ಮತ್ತು ನಾಯಕನ ಆಯ್ಕೆಯ ಭರಾಟೆಯಲ್ಲಿ ತಲ್ಲೀನರಾಗಿದ್ದಾರೆ.
ಅಮೀರ್ ಖಾನ್ ಪಾತ್ರ ಅಭಿನಯಿಸಲು ಗಣೇಶ್ ಅವರನ್ನು ಕೇಳಿದ್ದೂ ಆಯಿತು. ಆದರೆ ಗಣೇಶ್ ಬರೋಬ್ಬರಿ ಒಂದು ಕೋಟಿ ಅರವತ್ತು ಲಕ್ಷ ರೂಪಾಯಿ ಸಂಭಾವನೆಯ ಬೇಡಿಕೆ ಒಡ್ಡಿದ್ದರಿಂದ ದಂಗಾದ ನಿರ್ಮಾಪಕರು ಮುಖ ತಿರುಗಿಸಿ ಬೇರೆ ನಟನ ಆಯ್ಕೆಗೆ ತೊಡಗಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ನಿರ್ಮಾಪಕರು ಚಾಕೊಲೆಟ್ ಹೀರೋ ದಿಗಂತ್ ಅವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಕಡಿಮೆ ಸಂಭಾವನೆಗೆ ದಿಗಂತ್ ಒಪ್ಪಿಗೆ ಕೊಟ್ಟರೆ ಗಣೇಶ್ ಮಹಾ ಸದವಕಾಶವೊಂದನ್ನು ಕಳಕೊಳ್ಳುವುದಂತೂ ಖಚಿತ!