ಗೌಡರ ಮನೆಯ ಹುಡುಗಿ ಮತ್ತು ಬ್ರಾಹ್ಮಣರ ಮನೆಯ ಹುಡುಗನ ನಡುವಿನ ಪ್ರೇಮ ಕಥಾ ಹಂದರವನ್ನು ಹೊಂದಿರುವ 'ಗವಿಪುರ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಬ್ರಾಹ್ಮಣರ ಹುಡುಗನಾಗಿ ದಿವಂಗತ ಹಿರಿಯ ಪೊಲೀಸ್ ಅಧಿಕಾರಿ ವಿಜಯ ಸಾಸನೂರು ಅವರ ಸೋದರನ ಪುತ್ರ ಸೂರಜ್ ಸಾಸನೂರು ಅಭಿನಯಿಸಿದರೆ, ಗೌಡರ ಹುಡುಗಿಯಾಗಿ ಸೌಜನ್ಯ ಅಭಿನಯಿಸಿದ್ದಾರೆ. ಇವರಿಬ್ಬರಿಗೂ 'ಗವಿಪುರ' ಮೊದಲ ಚಿತ್ರ.
ಬ್ರಾಹ್ಮಣ ಹುಡುಗ ಮತ್ತು ಗೌಡರ ಹುಡುಗಿ ಪ್ರೇಮಕ್ಕೆ ಕುಟುಂಬದವರ ವಿರೋಧ ಬಂದು ಹುಡುಗಿಯ ಅಣ್ಣ ಜಾತೀಯ ಕಾರಣಕ್ಕೆ ಜಗಳಕ್ಕಿಳಿದು ಮಾರಾಮಾರಿ ನಡೆಯುತ್ತದೆ. ಕೊನೆಗೂ ಸಮಾಜಕ್ಕೆ ಉತ್ತಮ ಸಂದೇಶವೊಂದನ್ನು 'ಗವಿಪುರ' ಚಿತ್ರ ನೀಡಲಿದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಕುಮಾರ್.
'ಗವಿಪುರ'ದ ಪ್ರೇಮ ಕಥೆಯನ್ನು ವಾಸ್ತವ ನೆಲೆಗಟ್ಟಿನಲ್ಲಿ ಚಿತ್ರೀಕರಿಸಲಾಗಿದ್ದು ಎಲ್ಲಿಯೂ ವೈಭವೀಕರಣವಿಲ್ಲ. ಎರಡು ಫೈಟ್‌ಗಳು ಕೂಡಾ ಕಥೆಗೆ ತಕ್ಕಂತಿವೆ. ನಾಯಕ, ನಾಯಕಿ ಹೊಸಬರಾದರೂ ಉತ್ತಮವಾಗಿ ನಟಿಸಿದ್ದಾರೆ ಎಂದಿದ್ದಾರೆ ಕುಮಾರ್.
ಬೆಂಗಳೂರು, ಮಡಿಕೇರಿ, ಕುಶಾಲನಗರದಲ್ಲಿ ಚಿತ್ರೀಕರಣ ನಡೆದಿದ್ದು ಚಿತ್ರದ ಒಟ್ಟು ಆರು ಹಾಡುಗಳ ಪೈಕಿ ಮೂರು ಹಾಡುಗಳನ್ನು ಬ್ಯಾಂಕಾಕ್, ಪಟಾಯಮ್‌ನಲ್ಲಿ ಚಿತ್ರೀಕರಿಸಲಾಗಿದೆ. ಈಗ ಹಾಡುಗಳ ರೀರೆಕಾರ್ಡಿಂಗ್ ಕಾರ್ಯ ಸಾಗಿದೆ.
ಮೇ ತಿಂಗಳಲ್ಲಿ 'ಗವಿಪುರ' ತೆರೆ ಕಾಣಲಿದೆ. ಕುಮಾರ್ ನಿರ್ದೇಶನದ ಐದನೇ ಚಿತ್ರ ಇದಾಗಿದ್ದು ಜಗನ್ನಾಥ ಹೆಗ್ಡೆ ನಿರ್ಮಾಪಕರು. ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಶರತ್, ಲೋಹಿತಾಶ್ವ, ಸುಮಿತ್ರಾ, ಶಿವರಾಮ್, ಆನಂದ್, ಟೆನ್ನಿಸ್ ಕೃಷ್ಣ ಮತ್ತಿತರರು ತಾರಾಬಳಗದಲ್ಲಿದ್ದಾರೆ.