'ಒರಟ ಐ ಲವ್ ಯು' ಚಿತ್ರದ ನಾಯಕನಾಗಿ ಸ್ಯಾಂಡಲ್‌ವುಡ್ ಬಾಗಿಲು ತಟ್ಟಿದ ಪ್ರಶಾಂತ್ ಮನದಲ್ಲಿ ತಾನೊಬ್ಬ ತಂತ್ರಜ್ಞನಾಗಬೇಕೆಂಬ ಆಸೆ ಕಳೆದ ಎಂಟು ವರ್ಷಗಳಿಂದ ಮನೆ ಮಾಡಿತ್ತು. ಅವರ ಈ ಆಸೆ 'ಚಿರಾಯು' ಮೂಲಕ ಈಡೇರುತ್ತಿದೆ.
ಒರಟ ಪ್ರಶಾಂತ್ ನಟನೆಯ ಜೊತೆಗೆ ನಿರ್ದೇಶಕರಾಗುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಅವರೇ ನಿರ್ದೇಶಿಸುತ್ತಿರುವ 'ಚಿರಾಯು' ಚಿತ್ರದ ಶೂಟಿಂಗ್ ಬೆಂಗಳೂರು, ಮಂಡ್ಯ ಹಾಗೂ ಕುಂದಾಪುರದ ಸುತ್ತಮುತ್ತ ಒಂದೇ ಹಂತದಲ್ಲಿ ಸುಮಾರು ಐವತ್ತು ದಿನಗಳ ಕಾಲ ನಡೆಯಲಿದೆ.
'ಚಿರಾಯು' ಚಿತ್ರದ ಸ್ಕ್ತ್ರಿಪ್ಟ್ ವಿಭಿನ್ನವಾಗಿದೆ ಎಂದಿದ್ದಾರೆ ಪ್ರಶಾಂತ್. ಚಿತ್ರದಲ್ಲಿ ಡಬಲ್ ಓಪನಿಂಗ್ ಮತ್ತು ಡಬಲ್ ಇಂಟರ್ವಲ್ ಇರುತ್ತವಂತೆ. ಅಂದರೆ ಕಥೆ ಪ್ರಾರಂಭವಾಯ್ತು ಎಂದುಕೊಂಡರೆ ನಮ್ಮ ಊಹೆ ತಪ್ಪಾಗಿ, ಆ ನಂತರದ ದೃಶ್ಯಗಳಲ್ಲಿ ಕಥೆ ಪ್ರಾರಂಭವಾಗುತ್ತದೆಯಂತೆ. ಇನ್ನೇನು ಮಧ್ಯಂತರ ಬಂತು ಎಂದುಕೊಂಡರೆ ಮಗದೊಂದು ದೃಶ್ಯಕ್ಕೆ ಇಂಟರ್ವಲ್ ಇರುತ್ತದಂತೆ.
ಹಾಗಂತಾ ಇದು ಪ್ರಯೋಗಾತ್ಮಕ ಚಿತ್ರವಾಗಿರದೆ ಪಕ್ಕಾ ಕಮರ್ಶಿಯಲ್ ಚಿತ್ರವಾಗಿರುತ್ತದಂತೆ. ಮಾಸ್, ಕ್ಲಾಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಲವ್ ಹೀಗೆ ಎಲ್ಲ ಅಂಶಗಳೂ ಅಯಸ್ಕಾಂತದಂತೆ ಸೆಳೆಯಲಿದೆ ಎಂದಿದ್ದಾರೆ ಪ್ರಶಾಂತ್. 'ಒರಟ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಮುಮೈತ್ ಖಾನ್ ಅವರನ್ನು ಈ ಚಿತ್ರಕ್ಕೆ ಕರೆಸಲು ಪ್ರಶಾಂತ್ ನಿರ್ಧರಿಸಿದ್ದಾರೆ.