ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸದ್ದಿಲ್ಲದ ಅರವಿಂದ್ ಕೌಶಿಕ್ 'ತುಘಲಕ್' ದರ್ಬಾರ್ ಈಗ ಸೆನ್ಸಾರ್ ಮುಂದೆ! (Thuglaq | Aravind koushik | Nam Aeriyal Ondina | Rakshith)
ಸದ್ದಿಲ್ಲದ ಅರವಿಂದ್ ಕೌಶಿಕ್ 'ತುಘಲಕ್' ದರ್ಬಾರ್ ಈಗ ಸೆನ್ಸಾರ್ ಮುಂದೆ!
ಸ್ಯಾಂಡಲ್ ವುಡ್‌ನಲ್ಲಿ 'ನಮ್ ಏರಿಯಾಲ್ ಒಂದಿನಾ' ಸಾಕಷ್ಟು ನೀರೀಕ್ಷೆ ಹುಟ್ಟಿಸಿತ್ತಾದರೂ ಹೆಚ್ಚೇನೂ ಸದ್ದು ಮಾಡದೆ ಮಾಯವಾಗಿತ್ತು. ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಆ ಕಹಿ ಅನುಭವವನ್ನು ಇನ್ನೂ ಮರೆತಿಲ್ಲ. ಚಿತ್ರ ಹೊರ ಬಂದ ಬಳಿಕ ಗಾಂಧಿನಗರದಿಂದ ಮರೆಯಾಗಿ ಬಿಟ್ಟದ್ದ ಅವರು ಇದೀಗ ಸದ್ದಿಲ್ಲದೆ 'ತುಘಲಕ್' ದರ್ಬಾರ್ ನಡೆಸಿದ್ದಾರೆ. ಅಂದರೆ 'ತುಘಲಕ್' ಎಂಬ ಹೊಸ ಚಿತ್ರವನ್ನು ಈಗಾಗಲೇ ನಿರ್ದೇಶಿಸಿ ತೆರೆಗೆ ತರಲು ಅಣಿಯಾಗಿದ್ದಾರೆ.
'ಸಿನಿಮಾದೊಳಗಿನ ಸಿನಿಮಾ ಕಥೆಯನ್ನು 'ತುಘಲಕ್' ಹೊಂದಿದೆ. ಮನುಷ್ಯ ತನ್ನ ಜೀವನದಲ್ಲಿ ದಿಢೀರ್ ನಿರ್ಧಾರಗಳನ್ನು ಕೈಗೊಂಡಾಗ ಹೇಗೆ ಲೈಫ್ ಹಾಳಾಗುತ್ತದೆ ಎಂಬುದೇ ಕಥೆಯ ಜೀವಾಳ. ಇದು ಚಿತ್ರದೊಳಗಿನ ಚಿತ್ರವೊಂದರ ಕಥೆಯಾಗಿರುವುದರಿಂದ ನಿರ್ದೇಶಕನು ಚಿತ್ರವೊಂದನ್ನು ಹಿಟ್ ಮಾಡುವ ತರಾತುರಿಯಲ್ಲಿ ಪ್ರೇಕ್ಷಕರಿಗೆ ಮಂಕುಬೂದಿ ಎರಚಿ ಕೆಟ್ಟ ಐಡಿಯಾಗಳನ್ನು ತೋರಿಸುತ್ತಾನೆ ಎಂಬುದು ಒಟ್ಟಾರೆ ಕಥಾ ಹಂದರ. ಚಿತ್ರದೊಳಗಿನ ನಿರ್ದೇಶಕನನ್ನು ಖಳನಾಯಕನಂತೆ ಬಿಂಬಿಸಿದ್ದೇನೆ. ಇದು ಈಗಿನ ವಾಸ್ತವಕ್ಕೆ ಹತ್ತಿರವಾದ ಸಂಗತಿ' ಎಂದು ವಿವರಣೆ ಕೊಡುತ್ತಾರೆ ಅರವಿಂದ್ ಕೌಶಿಕ್.
ವೈಟ್ ಏರ್ ಎಂಟರ್‌ಟೈನ್‌ಮೆಂಟ್ ಲಾಂಛನದಡಿ ಮಂಗಳೂರಿನ ನಾಲ್ವರು ಗೆಳೆಯರು 'ತುಘಲಕ್' ಚಿತ್ರ ನಿರ್ಮಿಸಿದ್ದಾರೆ. ಇವರಿಗಿದು ಚೊಚ್ಚಲ ಚಿತ್ರ. ರಕ್ಷಿತ್ ಚಿತ್ರದ ನಾಯಕ. 'ನಮ್ ಏರಿಯಾಲ್ ಒಂದಿನಾ'ದಲ್ಲಿ ರಕ್ಷಿತ್ ಎರಡನೇ ನಾಯಕರಾಗಿ ಕಾಣಿಸಿಕೊಂಡಿದ್ದರು.
'ತುಘಲಕ್'ನಲ್ಲಿ ಮೂಲತಃ ಕೇರಳದ ಬೆಡಗಿ ಅನಿಷಾ ಉಮರ್ ಹಾಗೂ ಮೇಘನಾ ಗಾಂವ್‌ಕರ್ ನಾಯಕಿಯರು. ಅನಿಷಾ ಉಮರ್‌ಗಿದು ಮೊದಲ ಚಿತ್ರ. 'ನಮ್ ಏರಿಯಾಲ್ ಒಂದಿನಾ'ದಲ್ಲಿದ್ದ ಬಹುತೇಕ ಮಂದಿ 'ತುಘಲಕ್'ನಲ್ಲೂ ಮುಂದುವರಿದಿದ್ದಾರೆ.
ಅರ್ಜುನ್ ಸಂಗೀತ, ಮನೋಹರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಒಂದು ವಾರದ ಹಿಂದೆಯಷ್ಟೇ ಚಿತ್ರವನ್ನು ಮುಗಿಸಿರುವ ಅರವಿಂದ್ ಕೌಶಿಕ್ 'ತುಘಲಕ್'ನನ್ನು ಸೆನ್ಸಾರ್ ಮಂಡಳಿ ಮುಂದೆ ಕರೆದೊಯ್ಯಲು ಉತ್ಸುಕರಾಗಿದ್ದಾರೆ.