'ಸತ್ಯಾನಂದ'ನಿಗೂ ಕೋರ್ಟ್‌ಗೂ ಬಹಳ ನಂಟು. ಅಂತೆಯೇ ಇದಕ್ಕೆ ಮುಖ್ಯ ಕಾರಣ ನಿತ್ಯಾನಂದ ಎಂಬುದೂ ಜಗಜ್ಜಾಹೀರಾಗಿದೆ. ಮಾರ್ಚ್ ಎಂಟರಂದು ಚೆನ್ನೈ ನ್ಯಾಯಾಲಯದಿಂದ 'ಸತ್ಯಾನಂದ' ಚಿತ್ರೀಕರಣಕ್ಕೆ ತಡೆಹೇರಿ ನೋಟೀಸು ಜಾರಿಗೊಳಿಸಲಾಗಿತ್ತು. ಈಗ ಮತ್ತೊಂದು ನೋಟಿಸ್ ಜಾರಿಯಾಗಿದೆ. ಆದರದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಿಂದ.
ಸತ್ಯಾನಂದನ ನಿರ್ಮಾಪಕ ಮತ್ತು ನಿರ್ದೇಶಕ ಮದನ್‌ಪಟೇಲ್ ಅವರು ಈ ಹಿಂದೆ ಇದೇ ರೀತಿ ನೋಟೀಸು ಜಾರಿ ಮಾಡಿ ಚಿತ್ರೀಕರಣಕ್ಕೆ ತಡೆ ಬಂದಾಗ ಕಾನೂನು ರೀತಿಯಲ್ಲೇ ಉತ್ತರಿಸುವುದಾಗಿ ತಿಳಿಸಿ ಮೈಕೊಡವಿಕೊಂಡಿದ್ದರು. ಆದರೆ ಇಷ್ಟು ಬೇಗ ಮತ್ತೊಂದು ನೋಟೀಸು ಜಾರಿಯಾಗಿರುವುದು ಸತ್ಯಾ ಮತ್ತು ನಿತ್ಯಾ ಇಬ್ಬರ ಕಾನೂನು ಸಮರಕ್ಕೆ ರಣರಂಗ ಸಿದ್ದಪಡಿಸಿದಂತಿದೆ.
ಈ ಬಾರಿಯ ನೋಟೀಸಿನ ವಿಶೇಷ ಏನಂದ್ರೆ ನಿತ್ಯಾನಂದನ ಪಾತ್ರವನ್ನೇ ನಗುನಗುತ್ತಾ ನಟಿಸುತ್ತಿದ್ದ 'ಸತ್ಯಾನಂದ'ದ ನಾಯಕ ನಟ ರವಿಚೇತನ್‌ಗೂ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗಿದೆ.
ನಿರ್ಮಾಪಕ ಮದನ್ ಪಟೇಲ್ ಮತ್ತು ರವಿಚೇತನ್ ಏಪ್ರಿಲ್ 23ನೇ ದಿನಾಂಕದ ಒಳಗೆ ನೋಟೀಸು ಜಾರಿಮಾಡಿದ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ಗೆ ಭೇಟಿ ನೀಟಿ ಸ್ಪಷ್ಟೀಕರಣ ನೀಡಬೇಕು. ಅಲ್ಲಿಯವರೆಗೆ ಚಿತ್ರೀಕರಣ ಸ್ಥಗಿತಗೊಳಿಸಬೇಕು, ಸ್ವಾಮಿ ನಿತ್ಯಾನಂದನಿಗೆ ಹೋಲುವಂತಹ ಯಾವುದೇ ನಟನೆ, ಪ್ರಚಾರ ಮಾಡುವಂತಿಲ್ಲ ಎಂಬುದು ನೋಟಿಸ್ ಸಾರಾಂಶ.
ಸಂಕ್ಷಿಪ್ತ ಹಿನ್ನಲೆ... ಸ್ವಾಮಿ ನಿತ್ಯಾನಂದ ತನ್ನ ಬಿಡದಿಯ ಆಶ್ರಮದಲ್ಲಿ ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಅಪಾರ ಭಕ್ತರನ್ನು ವಂಚಿಸುತ್ತಿದ್ದಾರೆ ಅಥವಾ ಭಕ್ತರು ತಮಗರಿವಿದ್ದೊ, ಇಲ್ಲದೆಯೊ ಈ ಭಕ್ತಿಯ ಹೆಸರಿನ ವಂಚನೆಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ನಿಟ್ಟಿನಲ್ಲಿ 'ಸತ್ಯಾ ನಂದ' ಚಿತ್ರ ತೆಗೆಯುತ್ತಿರುವುದಾಗಿ ನಿರ್ಮಾಪಕ ಮದನ್ ಪಟೇಲ್ ಅವರ ಸದ್ಯದ ಸ್ಪಷ್ಟನೆ.
ನೋಟೀಸು ಜಾರಿಗೊಳಿಸಿರುವ ಸ್ವಾಮಿ ನಿತ್ಯಾನಂದ ಅವರ ಆಪ್ತ ಮೂಲಗಳ ಪ್ರಕಾರ ಇವೆಲ್ಲ ಸುಖಾ ಸುಮ್ಮನೆ ಹಣ ಮಾಡುವ ಸಿನಿಮಾ ದಂದೆ. ಕೇವಲ ಹಣ ಮಾಡುವ ದುರುದ್ದೇಶದಿಂದ ಇನ್ನೊಬ್ಬರ ಮಾನ ಹಾನಿ ಮಾಡುವುದು ಸಲ್ಲದು. ಜತೆಗೆ ಸ್ವಾಮಿ ನಿತ್ಯಾನಂದ ಲೈಂಗಿಕ ಪ್ರಕರಣದ ಸಂಪೂರ್ಣ ವಿಚಾರಣಾ ಮಾಹಿತಿ ಹೊರಬರದ ಕಾರಣ, ಈ ನಡುವೆ ಅಪಪ್ರಚಾರ ಮಾಡುವುದು ಸಾಧುವಲ್ಲ. ಆದ್ದರಿಂದ ಇದು ನಮ್ಮ ನ್ಯಾಯಪರ ಹೋರಾಟ ಎಂದು ಅಭಿಪ್ರಾಯ ಪಟ್ಟಿದ್ದಾರೆ.