'ನೀ ಇಲ್ಲದೆ' ಚಿತ್ರದ ವಿವಾದದಲ್ಲಿ ಆರ್ಥಿಕವಾಗಿ ಸೋತು ಹೈರಾನಾಗಿರುವ ನಾಯಕಿ ನಟಿ ಪೂಜಾ ಗಾಂಧಿ ಈ ಮೇಲಿನ ಪ್ರಶ್ನೆಗೆ ನೀಡಿರುವ ಉತ್ತರದ ಧಾಟಿಯನ್ನು ಗಮನಿಸಿದರೆ ಆಕೆ ಸಕಾರಾತ್ಮಕ ಉತ್ತರವನ್ನೇ ನೀಡಿದ್ದಾರೆ ಎಂಬ ಗುಮಾನಿ ಮೂಡದಿರದು.
ನಿವೃತ್ತರಾಗ್ತೀರಂತೆ, ಈಗಾಗಲೇ ಟ್ರಾವೆಲ್ ಕಂಪೆನಿ ಆರಂಭಿಸಿದ್ದೀರಂತೆ. ಇದು ನಿಜಾನಾ ಎಂಬ ಪತ್ರಕರ್ತರ ಪ್ರಶ್ನೆಗೆ ಮೋಹಕ ನಟಿ ಪೂಜಾ ಗಾಂಧಿ 'ಅಭಿಮಾನಿಗಳಿಗೆ ನನ್ನ ಸಿನಿಮಾಗಳು ಇಷ್ಟ ಆಗ್ತಿಲ್ಲ ಅಂದ್ರೆ ನಾನು ರಿಟೈರ್ ಆಗುವುದಕ್ಕಿಂತ ಮೊದಲೇ ಅವರೇ ನನ್ನನ್ನು ಮನೆಗೆ ಕಳುಹಿಸುತ್ತಾರೆಂದು ಅರ್ಥ. ಇನ್ನು ಟ್ರಾವೆಲ್ ಕಂಪೆನಿಯನ್ನು ನಮ್ಮ ತಂದೆಯವರು ನಡೆಸುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಮಾಡುವ ಯೋಚನೆ ಇದೆ' ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ಪೂಜಾ.
ಪೂಜಾ ಗಾಂಧಿ ಸದ್ಯಕ್ಕೆ ಪಿ.ಎನ್. ಸತ್ಯ ಅವರೊಂದಿಗೆ ಮಾಡುತ್ತಿರುವ 'ಪಾಗಲ್' ಚಿತ್ರ ಬಿಟ್ಟರೆ ಬೇರೆ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. 'ನೀ ಇಲ್ಲದೆ' ಚಿತ್ರಕ್ಕೆ ಸಂಬಂಧಿಸಿ ವಿವಾದ ಯಾಕೆ ಮಾಡಿಕೊಂಡಿರಿ ಎಂದು ಕೇಳಿದರೆ 'ಈ ಬಗ್ಗೆ ನೋ ಕಾಮೆಂಟ್ಸ್' ಎನ್ನುವ 'ಮುಂಗಾರು ಮಳೆ' ಖ್ಯಾತಿಯ ಈ ನಾಯಕಿ ನಟಿ 'ತಾಜ್ ಮಹಲ್', 'ಅನು' ಚಿತ್ರಗಳು ಗೆದ್ದಿರುವುದನ್ನು ಎತ್ತಿ ಹೇಳಿದ್ದಾರೆ. ಮುಂದುವರಿದು....
'ಚಿತ್ರದ ಸೋಲಿಗೆ ನಟಿಯಾಗಿ ನಾನೊಬ್ಬಳೇ ಕಾರಣಳಾಗುವುದಿಲ್ಲ. ಬೇರೆ ಬೇರೆ ಕಾರಣಗಳಿರುತ್ತವೆ. ನನ್ನ ಕೆಲಸ ನಾನು ನೀಟಾಗಿ ಮಾಡಿದ್ದೇನೆ. ಉಳಿದದ್ದು ಬೇರೆಯವರಿಗೆ ಬಿಟ್ಟದ್ದು. ಪೂಜಾ ಗಾಂಧಿ ಸಿನಿಮಾ ಗೆಲ್ಲುವುದಿಲ್ಲ ಅಂತ ನನ್ನೊಬ್ಬಳ ಮೇಲೆಯೇ ಗೂಬೆ ಕೂರಿಸಿದರೆ ಹೇಗೆ? ಸಿನಿಮಾ ಎನ್ನುವುದು ಒಂದು ಗೇಮ್. ಮುಂದೆ ಏನಾಗುತ್ತದೆಂದು ಯಾರಿಂದಲೂ ಹೇಳಕ್ಕಾಗಲ್ಲ. ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಬೇಕು' ಎಂದು ವೇದಾಂತಿಯಂತೆ ಉತ್ತರಿಸುವ ಪೂಜಾ ಸಿನಿಮಾಗಳು ಸೋತರೂ ಬೇಡಿಕೆ ಕಡಿಮೆಯಾಗಿಲ್ಲ ಮಾತ್ರವಲ್ಲ ನಿರ್ಮಾಪಕರು ಅವರನ್ನೇ ಹಾಕಿಕೊಂಡು ಸಿನಿಮಾ ತಯಾರಿಸಲು ಅವರ ಮನೆ ಮುಂದೆ ಪುನಃ ಹೋಗುತ್ತಿರುವುದೇಕೆ ಎಂಬ ಪ್ರಶ್ನೆಗೆ 'ಈ ಪ್ರಶ್ನೆಯನ್ನು ನೀವು ನಿರ್ಮಾಪಕ, ನಿರ್ದೇಶಕರಲ್ಲೇ ಕೇಳಬೇಕು' ಎಂದು ಜವಾಬು ನೀಡುತ್ತಾರೆ.
'ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಜನ ನೋಡುತ್ತಾರೆಂಬುದೇ ಅವರ ಉದ್ದೇಶವಾಗಿರಬಹುದು' ಎಂಬುದನ್ನು ಸೂಚಿಸಲೂ 'ಮುಂಗಾರು ಮಳೆ'ಯ ಈ ಸೊಗಸುಗಾರ್ತಿ ಮರೆಯುವುದಿಲ್ಲ.