ಬೆಂಗಳೂರಿನಲ್ಲಿ ಶುಕ್ರವಾರ ಬಸ್ ದಿನಾಚರಣೆ ಪ್ರಯುಕ್ತ ಕನ್ನಡ ಚಲನಚಿತ್ರರಂಗದ ನಟ-ನಟಿಯರು ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ನಗರ ಸಾರಿಗೆ ವ್ಯವಸ್ಥೆಗೆ ಬೆಂಬಲ ವ್ಯಕ್ತಪಡಿಸಿದರು. ಖ್ಯಾತ ಚಲನಚಿತ್ರ ನಟಿ ತಾರಾ, ಉದಯೋನ್ಮುಖ ನಟರಾದ ಯಶ್, ಚಿರಂಜೀವಿ ಸರ್ಜಾ, ಯೋಗೀಶ್ ಮತ್ತಿತರರು ತಮ್ಮ ತಮ್ಮ ಮನೆಗಳಿಂದ ಬಸ್ನಲ್ಲಿ ಜಯನಗರ ನಾಲ್ಕನೆ ಬ್ಲಾಕ್ ಬಸ್ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಎಲ್ಲರೂ ಜತೆಗೂಡಿ ಶಾಂತಿನಗರ ಬಸ್ ನಿಲ್ದಾಣಕ್ಕೆ ಬಸ್ನಲ್ಲೇ ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿ ತಾರಾ, ಬಸ್ ದಿನಾಚರಣೆ ಕೇವಲ ಮಾಸಿಕ ಆಚರಣೆ ಆಗದೆ ಪ್ರತಿ ವಾರ ಇದನ್ನು ನಡೆಸಬೇಕು. ಅಂದರೆ ಜನರು ದುಬಾರಿ ವೆಚ್ಚದಲ್ಲಿ ತಮ್ಮ ಖಾಸಗಿ ವಾಹನವನ್ನು ಬಳಸದೆ ಸರಕಾರಿ ಬಸ್ಸನ್ನೇ ತಮ್ಮ ಪ್ರಯಾಣಕ್ಕೆ ಬಳಸಿ ಎಂಬ ಸಂದೇಶ ನೀಡಿದರು.
ಈ ಮೂಲಕ ಪರಿಸರ ಸಂರಕ್ಷಣೆಗೆ ನಗರ ವಾಸಿಗಳು ಮುಂದಾಗಬೇಕಿದೆ ಎಂದರು. ಬಸ್ ಪ್ರಯಾಣದಿಂದ ಪರಿಸರ ಮಾಲಿನ್ಯ ಕಡಿತದ ಜೊತೆಗೆ ಇಂಧನ ಉಳಿತಾಯವಾಗಲಿದೆ ಎಂದ ಅವರು ಬಸ್ ದಿನಾಚರಣೆ ಮೂಲಕ ಬಿಎಂಟಿಸಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ನಟ ಯೋಗೀಶ್ ಮಾತನಾಡಿ ಬಿಎಂಟಿಸಿಯ ಬಸ್ ದಿನಾಚರಣೆ ನಿಜಕ್ಕೂ ಒಂದು ಉತ್ತಮ ಮಾದರಿ ಕೆಲಸ ಎಂದು ಹೇಳಿದರು.
ಸ್ವಂತ ವಾಹನ ಬಳಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಿಪರೀತವಾಗಿರುವ ಟ್ರಾಫಿಕ್ ಸಮಸ್ಯೆಗೆ ಬಸ್ ದಿನಾಚರಣೆ ಒಂದು ಉತ್ತಮ ಮಾರ್ಗೋಪಾಯವಾಗಿದೆ ಎಂದು ನಟ ಚಿರಂಜೀವಿ ಸರ್ಜಾ ಅಭಿಪ್ರಾಯಪಟ್ಟರು.