ಎಲ್ಲರಿಂದಲೂ ಸೂಪರ್ ಎಂದು ಹೊಗಳಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ ಅಭಿನಯ ಮತ್ತು ನಿರ್ದೇಶನದ 'ಸೂಪರ್' ಚಿತ್ರ ಮಾರ್ಚ್‌ನಲ್ಲೇ ಶತದಿನ ಪೂರೈಸಿದ್ದರೂ ಚಿತ್ರ ತಂಡ ಆ ಸಂಭ್ರಮವನ್ನು ಆಚರಿಸಿರಲಿಲ್ಲ. ಇದು ರಿಯಲ್ ಸ್ಟಾರ್ ವಿಶೇಷತೆ.
ಇನ್ನೀಗ 'ಸೂಪರ್' ತಂಡಕ್ಕೆ ಕಾರ್ಮಿಕರ ದಿನವಾದ ಮೇ ಒಂದರಂದು ಶತದಿನೋತ್ಸವದ ಸಂಭ್ರಮಾಚರಣೆಗೆ ಕಾಲ ಕೂಡಿಬರುತ್ತಿದೆಯಂತೆ. ಬೆಂಗಳೂರಿನ ಅರಮನೆ ಮೈದಾನದ 'ಗಾಯತ್ರಿ ವಿಹಾರ'ದಲ್ಲಿ ಅಂದು ಅದ್ದೂರಿ ಸಮಾರಂಭ ನಡೆಯಲಿದೆ.
ಇದು ಉಪೇಂದ್ರ ಮತ್ತು ರಾಕ್‌ಲೈನ್ ವೆಂಕಟೇಶ್ ಅವರ ಕಾರ್ಯಕ್ರಮವಾದ್ದರಿಂದ ಅಲ್ಲಿ ವಿಶೇಷತೆಯ ಆಗರವೇ ಇರುತ್ತದೆ ಎಂದು ಅವರ ಅಭಿಮಾನಿಗಳು ನೀರೀಕ್ಷಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಅಭಿಮಾನಿಗಳ ನೀರೀಕ್ಷೆಗೆ ಮೀರಿಯೇ 'ಸೂಪರ್' ಚಿತ್ರ ತಂಡ ರಸದೌತಣವನ್ನು ನೀಡಲಿದೆ.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ 'ಸೂಪರ್' ಚಿತ್ರದ ಯಶಸ್ಸಿಗೆ ದುಡಿದ ಚಿತ್ರ ತಂಡದ ಎಲ್ಲರನ್ನೂ ಅಭಿನಂದಿಸಲಿದ್ದಾರೆ. ಏಪ್ರಿಲ್‌ನಲ್ಲೇ ಈ ಕಾರ್ಯಕ್ರಮ ನಡೆಸಲಾಗುವುದೆಂದು ಈ ಹಿಂದೆ ಪ್ರಕಟಿಸಲಾಗಿತ್ತಾದರೂ, ಈಗ ಕಾರ್ಮಿಕರ ದಿನದಂದಿಗೆ ಮುಹೂರ್ತ ನಿಗದಿಯಾಗಿದೆ. ಉಪೇಂದ್ರ ಅಭಿಮಾನಿಗಳಿಗೆ ಕಾರ್ಯಕ್ರಮ ಮರೆಯದ ಖುಷಿ ಕೊಡುವುದಂತೂ ಖಾತ್ರಿ.