ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಉದ್ಘಾಟನಾ ಸಮಾರಂಭದಲ್ಲಿ ಶಾರುಕ್ ಖಾನ್ ಜತೆ ಹೆಜ್ಜೆ ಹಾಕಿದ ಪಂಚ ಬಾಷಾ ತಾರೆ ಶ್ರೇಯಾ ಶರಣ್ ಇದೀಗ ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಅಂದಹಾಗೆ ಅವರು ಬಂದಿರುವುದು ಇಲ್ಲಿ ನಡೆಯುತ್ತಿರುವ ಕ್ರಿಕೆಟ್‌ನಲ್ಲಿ ಹೆಜ್ಜೆಹಾಕುವುದಕ್ಕಲ್ಲ. ಕನ್ನಡ ಚಿತ್ರದಲ್ಲಿ ನಟಿಸಲು. ಅದೂ ರಿಯಲ್ ಸೂಪರ್ ಸ್ಟಾರ್ ಉಪೇಂದ್ರ ಜೋಡಿಯಾಗಿ ಎಂಬುದು ವಿಶೇಷ. ಮೇ 15ರಂದು ಮುಹೂರ್ತ ಕಾಣಲಿರುವ ಈ ಚಿತ್ರದ ನಿರ್ದೇಶಕ ಪಿ.ವಾಸು.
ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸಿಗೆ ಲಗ್ಗೆಯಿಟ್ಟಿರುವ ಈ ಬೆಡಗಿ ಈಗ ಕನ್ನಡಿಗರ ಮನಸ್ಸನ್ನು ಕದಿಯಲು ಬರುತ್ತಿದ್ದಾರೆ. ಈಗಾಗಲೇ ಅರಸು ಚಿತ್ರದಲ್ಲಿ ಕಿರು ಪಾತ್ರದಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದ ಶ್ರೇಯಾ ಕನ್ನಡ ಚಿತ್ರದಲ್ಲಿ ಪ್ರಮುಖ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ನೇಹಾ ಕೆಲವಾರು ಇಂಗ್ಲೀಷ್ ಚಿತ್ರಗಳಲ್ಲೂ ನಟಿಸಿದ್ದಾರೆ.
ಡಾ. ರಾಜ್ ಕುಮಾರ್, ವಿಷ್ಣು ವರ್ಧನ್, ರಜನಿಕಾಂತ್ ಮುಂತಾದ ಪ್ರಸಿದ್ಧ ನಟರಿಗೆ ಚಿತ್ರನಿರ್ದೇಶಿಸಿ ಅವರನ್ನು ಮುಂಚೂಣಿಯಲ್ಲಿರಿಸುವಲ್ಲಿ ನಿರ್ದೇಶಕ ಪಿ.ವಾಸು ಅವರ ಪಾತ್ರ ಮಹತ್ವದ್ದು. ಅಂಥಹ ನಿರ್ದೇಶಕ ಈಗ ಉಪೇಂದ್ರ ಮತ್ತು ಶ್ರೇಯಾ ಜೋಡಿಗೆ ಚಿತ್ರ ನಿರ್ದೇಶಿಸುತ್ತಿದ್ದಾರೆಂದರೆ ಶ್ರೇಯಾ ಕನ್ನಡ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿಯಲಿದ್ದಾರೆ ಎಂದೇ ಅರ್ಥ.
ದಕ್ಷಿಣ ಭಾರತದ ಬಿಡುವಿಲ್ಲದ ಈ ನಟಿ ಈಗಾಗಲೇ ರೌದ್ರಂ, ಕಸನೊವಾ, ಮಿಡ್‌ನೈಟ್ಸ್ ಚಿಲ್ಡ್ರನ್, ವಿಶ್ವರೂಪಂ ಸೇರಿದಂತೆ ಮನೋಜ್ ಮಂಚು ಅವರ ಹೊಸ ಚಿತ್ರವೊಂದಕ್ಕೆ ನಟಿಸಲು ಒಪ್ಪಿಕೊಂಡಿದ್ದಾರೆ.