ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭ್ರಷ್ಟಾಚಾರ ನಿರ್ಮೂಲನಕ್ಕಾಗಿ ಕಾಂಗ್ರೆಸ್ ಸೇರಿದ ರಮ್ಯಾ! (Youth Congress | Ramya | Ambarish | S.M.Krishna)
PR
ಯುವ ಕಾಂಗ್ರೆಸ್‌ನ ಸದಸ್ಯೆಯಾಗಿದ್ದೇನೆ. ನೀವೂ ಆಗ್ತೀರಾ, ಹಾಗಾದ್ರೆ ಈ ಸಂಖ್ಯೆಗೆ ಕರೆಮಾಡಿ 18604254357 ಎಂಬುದು ನಟಿ ರಮ್ಯಾ ಅವರ ಟ್ವಿಟ್ಟರ್ ಒಕ್ಕಣೆ. ಇದು ತನ್ನ ಅಭಿಮಾನಿಗಳನ್ನು ಯುವ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ರಮ್ಯಾ ಅವರು ಮಾಡುತ್ತಿರುವ ಚುನಾವಣಾ ಪ್ರಚಾರ ಎನ್ನುತ್ತಿದೆ ಗಾಂಧಿನಗರ.

ಇವಿಷ್ಟು ಮಾತ್ರವಲ್ಲದೆ ಟ್ವಿಟ್ಟರ್ ಸಹಬಳಕೆದಾರರೊಂದಿಗೆ ತನ್ನ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ, ನೀವು ಭ್ರಷ್ಟಾಚಾರವನ್ನು ಮನಪೂರ್ವಕವಾಗಿ ವಿರೋಧಿಸುವಿರಾದರೆ ಬದಲಾವಣೆ ಯಾಕಾಗಬಾರದೆಂದು ಪ್ರಶ್ನಿಸಿದ್ದಾರೆ.

ರಾಜಕೀಯ ಪಕ್ಷಕ್ಕೆ ಸೇರುವ ಮೂಲಕ ಮಾತ್ರ ಉತ್ತಮ ಬದಲಾವಣೆ ತರಲು ಸಾಧ್ಯ ಎಂದೂ ಪ್ರತಿಕ್ರಿಯಿಸಿರುವ ರಮ್ಯಾ, ಇತ್ತೀಚೆಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದೆ ಎಂದೂ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ಭುಗಿಲೆದ್ದಿರುವ ಭ್ರಷ್ಟಾಚಾರದ ವಿರುದ್ಧ ಜನಲೋಕಪಾಲ್ ಮಸೂದೆ ಜಾರಿಗಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಉಪವಾಸ ಕೈಗೊಂಡಿದ್ದಾಗ ಎಲ್ಲಾ ಚಿತ್ರನಟರೊಂದಿಗೆ ರಮ್ಯಾ ಕೂಡ ಬೆಂಬಲ ವ್ಯಕ್ತಪಡಿಸಿದ್ದರು.

ಈ ಹಿಂದೆ ರಮ್ಯಾ ಅವರು ರಾಜಕೀಯಕ್ಕೆ ಸೇರುವ ಸುದ್ಧಿ ಎಲ್ಲೆಲ್ಲೂ ಹರಡಿತ್ತು. ಹೌದಾ, ನೀವು ಮಂಡ್ಯದಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುತ್ತೀರಾ ಎಂದು ಪ್ರಶ್ನಿಸಿದರೆ. ನನ್ನ ಸಂಬಂಧಿಕರು ರಾಜಕೀಯದಲ್ಲಿದ್ದಾರೆ. ನಂದೇನಿದ್ದರೂ ಸಿನಿಮಾ ಕ್ಷೇತ್ರ. ಇವತ್ತಿನ ವರೆಗೂ ರಾಜಕೀಯಕ್ಕೆ ಸೇರುವ ಯಾವುದೇ ಆಲೋಚನೆಗಳಿಲ್ಲ ಎಂದಿದ್ದ ರಮ್ಯಾ, ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂದೆಲ್ಲಾ ರಾಜ್ಯ ಸರಕಾರವನ್ನು ಟೀಕಿಸಿದ್ದರು. ಜತೆಗೆ ಇಂಥಾ ಪಕ್ಷವನ್ನು ಆಯ್ಕೆ ಮಾಡಿದ್ದಕ್ಕೆ ನಾಚಿಕೆಯಾಗಬೇಕು ಎಂದೆಲ್ಲಾ ಕಿಡಿಕಾರಿದ್ದರು.

ಈ ಹೇಳಿಕೆಯೊಂದಿಗೆ ವಿವರಣೆ ನೀಡಿದ್ದ ರಮ್ಯಾ, ಪ್ರತೀ ಭಾರತೀಯ ಪ್ರಜೆಗೂ ಸರ್ಕಾರವನ್ನು ಟೀಕಿಸುವ ಅಧಿಕಾರ ಇದೆ ಎಂದು ರಾಜ್ಯಶಾಸ್ತ್ರ ಭೋದನೆ ಮಾಡಿ, 2ಜಿ ಹಗರಣದ ಬಗ್ಗೆ ಸೊಲ್ಲೆತ್ತಲು ಮರೆತಿದ್ದರು.

ಅಭಿಮಾನಿಗಳು ಸೇರಿದಂತೆ ಗೌಡ ಸಮುದಾಯದ ಅಪಾರ ಬೆಂಬಲ ಹಾಗೂ ಸಂಬಂಧಿಕರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಬೆಂಬಲ ನಟಿ ರಮ್ಯಾ ಅವರಿಗಿದೆ. ಇನ್ನು ನಟ ಅಂಬರೀಷ್ ಅವರ ಬೆಂಬಲ ಸದಾ ಇರುವುದರಲ್ಲಿ ಯಾವುದೇ ಸಂಶಯವಿಲ್ಲ.
ಇವನ್ನೂ ಓದಿ