ನೈಸ್ ಸಂಸ್ಥೆಯ ಒಡೆಯ ಅಶೋಕ್ ಖೇಣಿ ಅವರು ಬುಲ್ಡೋಜರ್ ಖರೀದಿಸದೆ ಮತ್ತಿನ್ನಿನ್ನೇನು ಖರೀದಿಸ್ಬೇಕು ಎಂದು ಹುಬ್ಬು ಮೇಲೆ ಮಾಡ್ತಾ ಇದ್ದೀರಾ..? ಸ್ಪಲ್ಪ ತಾಳಿ, ಅದೂ 17 ಕೋಟಿ ಕೊಟ್ಟು ಬುಲ್ಡೋಜರ್ ಖರೀದಿಸುತ್ತಾರಾ ಅನುಭವಿ ಖೇಣಿ!.
ಖೇಣಿ ಖರೀದಿಸಿರುವುದು 'ಕರ್ನಾಟಕ ಬುಲ್ಡೋಜರ್'. ಅಂದರೆ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್‌ಗಳ ಕ್ರಿಕೆಟ್ ತಂಡ. ಎಲ್ಲೆಲ್ಲೂ ಕ್ರಿಕೆಟ್ ಅಲೆ ಎದ್ದಿರುವಾಗ ನಮ್ಮವರೇನು ಕಡಿಮೆ ಎಂಬ ಪ್ರತಿಷ್ಠೆ ಬೇಡವೇ..? ಅದಕ್ಕಾಗಿ ಈ ಎಲ್ಲಾ ಕಸರತ್ತು. ಜತೆಗೆ ಕನ್ನಡ ಚಿತ್ರರಂಗದ ಕಲಾವಿದರ ಸಂಘಕ್ಕೆ ಮೂರು ಕೋಟಿ ಹಣ ಕೊಡುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ ಅಶೋಕ್ ಖೇಣಿ!
PR
PR
ಅಶೋಕ್ ಖೇಣಿ ಎಂಟರ್‌ಟೈನ್‌ಮೆಂಟ್ ಕಂಪನಿ (ಎಕೆಕೆ ಎಂಟರ್‌ಟೈನ್‌ಮೆಂಟ್) 'ಕರ್ನಾಟಕ ಬುಲ್ಡೋಜರ್' ತಂಡದ ಒಡೆತನ ಹೊಂದಿದೆ.
ಕನ್ನಡ ಚಿತ್ರರಂಗದ ನಟರು ಮತ್ತು ತಾಂತ್ರಿಕ ವರ್ಗದವರನ್ನು ಒಳಗೊಂಡ 21ಮಂದಿ ಈ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸೆಲಬ್ರಿಟಿ ಕ್ರಿಕೆಟ್ ಲೀಗ್‌ನ (ಸಿಸಿಎಲ್) ಟ್ವೆಂಟಿ 20 ಕ್ರಿಕೆಟ್ ಸರಣಿಗಾಗಿ ಸಿದ್ಧವಾಗುತ್ತಿರುವ ಈ ತಂಡಕ್ಕೆ ಕಿಚ್ಚ ಸುದೀಪ್ ನಾಯಕ. ಧ್ರುವ ಸರ್ಜಾ ಉಪನಾಯಕ.
ಪ್ರಮುಖ ಆಟಗಾರರ ಸರದಿಯಲ್ಲಿ ಶಿವರಾಜ್ ಕುಮಾರ್, ಉಪೇಂದ್ರ, ಚಿರಂಜೀವಿ ಸರ್ಜಾ, ದಿಗಂತ್, ಶ್ರೀ ಮುರಳಿ, ಜೆಕೆ, ಕಿರಣ್, ಪ್ರದೀಪ್, ಅಭಿಮನ್ಯು, ರಾಹುಲ್, ವಿಜಯ್, ಧರ್ಮ ಕೀರ್ತಿರಾಜ್, ಭಾಸ್ಕರ್, ರಾಜು, ಸೋಮು, ರಾಜೀವ, ತರುಣ್ ಚಂದ್ರ, ತರುಣ್ ಸುಧೀರ್ ಮುಂತಾದವರಿದ್ದಾರೆ.
ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಮತ್ತು ನಟಿ ರಮ್ಯಾ 'ಕರ್ನಾಟಕ ಬುಲ್ಡೋಜರ್' ತಂಡದ ಪ್ರಚಾರ ರಾಯಭಾರಿಗಳು. ಅಂದಹಾಗೆ 'ಕರ್ನಾಟಕ ಬುಲ್ಡೋಜರ್' ತಂಡ ಪ್ರಪ್ರಥಮವಾಗಿ ಎದುರಿಸಲಿರುವುದು ಸಲ್ಮಾನ್ ಖಾನ್ ಒಡೆತನದ 'ಮುಂಬೈ ಹೀರೋಸ್' ತಂಡವನ್ನು. ಜೂನ್ ನಾಲ್ಕರಂದು ಬೆಂಗಳೂರಿನಲ್ಲಿ ನಡೆಯಲಿರುವ ಕನ್ನಡ ಮತ್ತು ಹಿಂದಿ ನಟರ ಕಾಳಗಕ್ಕೆ ಆಯಾ ಭಾಷೆಯ ನಟಿಯರೂ ಹುರಿದುಂಬಿಸಲಿದ್ದಾರೆ.
ಈ ಹಿಂದೆ ವಿಶಾಖ ಪಟ್ಟಣದಲ್ಲಿ ಪ್ರಚಾರಾರ್ಥ ನಡೆದ ಪಂದ್ಯದಲ್ಲಿ ಸುದೀಪ್ ನಾಯಕತ್ವದ ದಕ್ಷಿಣ ಭಾರತದ ನಟರನ್ನು ಒಳಗೊಂಡಿದ್ದ 'ಸೌತ್ ಸೂಪರ್ ಸ್ಟಾರ್ಸ್' ತಂಡ 'ಮುಂಬೈ ಹೀರೋಸ್' ತಂಡವನ್ನು ಮಣಿಸಿತ್ತು.