ಹುಬ್ಬಳ್ಳಿಯಲ್ಲಿ ಬುಧವಾರ ಸಂಜೆ ನಡೆದ 'ಮೈಲಾರಿ' ಶತದಿನೋತ್ಸವ ಸಮಾರಂಭದಲ್ಲಿ 'ಜಕ್ಕನಕ್ಕ ಜಕ್ಕನಕ್ಕ' ಎಂದು ಕುಣಿದ ಶಿವರಾಜ್ ಕುಮಾರ್........'ಎಲ್ಲೋ ಜೋಗಪ್ಪ ನಿನ್ನರಮನೆ' ಅಂತ ಹಾಡಿ ಕುಣಿದ ಗುರುಕಿರಣ್......ಡಾ. ರಾಜ್ ಕುಟುಂಬದ ಕಲಾ ಸೇವೆಯನ್ನು ಶ್ಲಾಘಿಸಿದ ಮೂರು ಸಾವಿರ ಮಠದ ಶ್ರೀ ರಾಜಯೋಗೀಂದ್ರ ಮಹಾಸ್ವಾಮಿ.....ಮುಗಿಲು ಮುಟ್ಟಿದ ಅಭಿಮಾನಿಗಳ ಜಯಘೋಷ.
ಮೂರು ಸಾವಿರ ಮಠದ ಮೈದಾನದಲ್ಲಿ ನಡೆದ 'ಮೈಲಾರಿ' ಶತದಿನೋತ್ಸವ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳಿವು. ಶಿವರಾಜ್ ಕುಮಾರ್ ಅಭಿನಯಿಸಿದ ಪ್ರಮುಖ ಚಿತ್ರಗೀತೆಗಳನ್ನು ಕಾರ್ಯಕ್ರಮದುದ್ದಕ್ಕೂ ಹಾಡಿ ಕುಣಿದು ಪ್ರೇಕ್ಷಕರನ್ನು ರಂಜಿಸಿದ್ದು ವಿಶೇಷವಾಗಿತ್ತು.
'ಶ್ರೀರಾಮ್' ಚಿತ್ರದ 'ಎಲ್ಲ ನಿನ್ನ ಮಾಯೆ ಎಲ್ಲೆಲ್ಲೂ ನಿನ್ನ ಛಾಯೆ...' ಎಂಬ ಹಾಡಿಗೆ ನರ್ತಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಚಿತ್ರದ ಮತ್ತೊಂದು ಗೀತೆ 'ಕಮ ಕಮಾನ' ಹಾಡನ್ನು ಚೇತನ್ ಮತ್ತು ಶಮಿತಾ ಹಾಡಿದರೆ 'ಹಾರ್ಟ್ ಅನ್ನೋ ಅಡ್ಡಾದಲ್ಲಿ...' ಎಂಬ ಹಾಡನ್ನು ಚೈತ್ರಾ ತಮ್ಮ ಸುಮಧುರ ಕಂಠಸಿರಿಯಲ್ಲಿ ಹಾಡಿ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದರು.
'ಬಂಡಲೂರು ಬಂಡರೆಲ್ಲ...' ಎಂಬ 'ಖುಷಿ' ಚಿತ್ರದ ಹಾಡಿಗೆ ನಟ ತರುಣ್ ಸುಧೀರ್ ಹೆಜ್ಜೆ ಹಾಕಿದರೆ 'ಎಲ್ಲೋ ಜೋಗಪ್ಪ ನಿನ್ನರಮನೆ' ಎಂದು ಹಾಡುತ್ತಾ ಬಂದ ಸಂಗೀತ ನಿರ್ದೇಶಕ ಗುರುಕಿರಣ್ ಒಂದಾದ ಮೇಲೊಂದರಂತೆ 'ಚುಕುಬುಕು ಚುಕುಬುಕು' ಎಂದು ಹಾಡಿದರು. ಜತೆಗೆ ಸಹನರ್ತಕಿಯರೊಂದಿಗೆ ಹೆಜ್ಜೆ ಹಾಕಿದರು.
'ಕುಟುಂಬ' ಚಿತ್ರದ ಧ್ವನಿ ಸುರುಳಿ ಬಿಡುಗಡೆಗಾಗಿ ಹುಬ್ಬಳ್ಳಿಗೆ ಆಗಮಿಸಿದ್ದು ಆ ನಂತರ 'ಜೋಗಿ' ಹಾಗೂ ಈಗ 'ಮೈಲಾರಿ' ಚಿತ್ರದ ಶತದಿನೋತ್ಸವ ಕಾರ್ಯಕ್ರಮ ನೀಡುತ್ತಿರುವುದು ಅತೀವ ಸಂತಸದ ಸಂಗತಿಯಾಗಿದೆ ಎಂದು ಗುರುಕಿರಣ್ ನುಡಿದರು.