ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೊನೆಗೂ ಬಿಡುಗಡೆಗೆ ಸಿದ್ಧವಾದ 'ಬಣ್ಣ ಬಣ್ಣದ ಲೋಕ' (Banna Bannada Loka | Krishnappa | Meghana Gowda | Ram Prasad)
PR
ಕೃಷ್ಣಪ್ಪ ಮತ್ತು ಮೇಘನಾ ಗೌಡ ಅವರು ಮೂರು ವರ್ಷಗಳ ಹಿಂದೆ ನಿರ್ಮಿಸಲು ಆರಂಭಿಸಿದ 'ಬಣ್ಣ ಬಣ್ಣದ ಲೋಕ' ಚಿತ್ರ ಪೂರ್ಣಗೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ರಾಮ್‌ ಪ್ರಸಾದ್ ನಿರ್ದೇಶಿಸಿರುವ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ಶಾಸಕ ನೆ.ಲ.ನರೇಂದ್ರ ಬಾಬು ಅವರು ಆಡಿಯೋ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಿರ್ಮಾಪಕ ಕೃಷ್ಣಪ್ಪನವರಲ್ಲದೆ ಇಡೀ ಚಿತ್ರ ತಂಡ ಸಮಾರಂಭದಲ್ಲಿ ಹಾಜರಿತ್ತು. ನಿರ್ದೇಶಕ ರಾಮ್‌ ಪ್ರಸಾದ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು ಅವರೇ ಚಿತ್ರದ ನಾಯಕರು. ರಾಮ್‌ ಪ್ರಸಾದ್ ಅವರ ಮೂಲ ಹೆಸರು ಪ್ರಸಾದ್‌ ಕುಮಾರ್. ಇವರ ತಂದೆಯವರು ಡಾ. ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು.

'ಚಲಿಸುವ ಮೋಡಗಳು' ಚಿತ್ರದ ಒಂದು ಪುಟ್ಟ ಪಾತ್ರದಲ್ಲಿ ಪ್ರಸಾದ್ ಕುಮಾರ್ ನಟಿಸಿದ್ದರು. ಆ ಚಿತ್ರದಲ್ಲಿ ರಾಜ್ ಪಾತ್ರದ ಹೆಸರು ರಾಮ್ ಪ್ರಸಾದ್. ಹಾಗಾಗಿ ರಾಜ್ ಅಭಿಮಾನಿಯಾಗಿದ್ದ ತಂದೆಯು ಮಗನ ಹೆಸರನ್ನು ಬದಲಾಯಿಸಿ ರಾಮ್ ಪ್ರಸಾದ್ ಎಂದು ಮರುನಾಮಕರಣ ಮಾಡಿದರಂತೆ.

ತನ್ನ ಕಾಲೇಜು ದಿನಗಳಲ್ಲಿ ನಡೆದ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ರಾಮ್ ಪ್ರಸಾದ್ ಅವರು 'ಬಣ್ಣ ಬಣ್ಣದ ಲೋಕ' ಚಿತ್ರದ ಕಥೆ ರಚಿಸಿದ್ದಾರೆ. ಬದುಕಿನ ಬಣ್ಣಗಳ ಪರಿಚಯ ಈ ಚಿತ್ರದಲ್ಲಿ ಇರುತ್ತದಂತೆ. ಈ ಚಿತ್ರದ ಶೂಟಿಂಗ್ 2008ರಲ್ಲೇ ಆರಂಭವಾಗಿತ್ತು. ತದನಂತರ ಕುಂಟುತ್ತಾ ಸಾಗಿ ಈಗ ಚಿತ್ರ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ.

ಸಹ ನಿರ್ಮಾಪಕಿಯಾಗಿರುವ ಮೇಘನಾ ಗೌಡ ಅವರು ಈ ಚಿತ್ರದ ನಾಯಕಿ ನಟಿ. ಇವರಿಗೆ ಜಿಲ್ಲಾಧಿಕಾರಿಯಾಗುವ ಆಸೆಯಿತ್ತಂತೆ ಆದರೆ ಈಗ ನಾಯಕಿ ನಟಿ ಹಾಗೂ ಸಹ ನಿರ್ಮಾಪಕಿಯಾಗಿದ್ದಾರೆ. ಥಾಮಸ್ ಅವರ ಸಂಗೀತ, ಚಂದ್ರಶೇಖರ್ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಹರ್ಷ, ಧರ್ಮ, ಕೀರ್ತಿರಾಜ್ ಮುಂತಾದವರಿದ್ದಾರೆ.

ಚಿತ್ರದಲ್ಲಿ ಆರು ಹಾಡುಗಳಿದ್ದು ಆನಂದ್ ಆಡಿಯೋ ಸಂಸ್ಥೆ ಧ್ವನಿ ಸುರುಳಿಯನ್ನು ಮಾರುಕಟ್ಟೆಗೆ ತಂದಿದೆ. ಕನ್ನಡ ಭಾಷೆಯಲ್ಲಿ ಒಂದು ಒಳ್ಳೆಯ ಚಿತ್ರ ಮಾಡಬೇಕು ಎಂಬುದು ಕೃಷ್ಣಪ್ಪನವರ (ಇವರು ಮುಂಗಾರು ಮಳೆ ನಿರ್ಮಾಪಕ ಕೃಷ್ಣಪ್ಪ ಅಲ್ಲ) ಬಹಳ ವರ್ಷಗಳ ಕನಸಾಗಿತ್ತಂತೆ. 'ಕೊನೆಗೂ ಒಂದು ಸರಳ ಹಾಗೂ ಸುಂದರ ಚಿತ್ರವನ್ನು ನಿರ್ಮಿಸಿದ್ದೇವೆ' ಎನ್ನುತ್ತಾರೆ ಕೃಷ್ಣಪ್ಪ.
ಇವನ್ನೂ ಓದಿ