ಕನ್ನಡ ಚಿತ್ರರಂಗಕ್ಕೆ ಹೆಸರು, ಹಿರಿಮೆ ತಂದು ಕೊಟ್ಟ ಶ್ರೇಷ್ಠ ನಟ, ಕನ್ನಡ ಭಾಷೆಯನ್ನು ಕಲಾಸೇವೆಯ ಮೂಲಕ ಲೋಕವೆಲ್ಲೆಡೆ ಪಸರಿಸಿದ ಕಣ್ಮಣಿ, ಸುಮಧುರ ಸಂಗೀತದಿಂದ ಎಲ್ಲಾ ವಯೋಮಾನದರನ್ನೂ ರಂಜಿಸಿದ, ಅವೆಷ್ಟೋ ಅನಕ್ಷರಸ್ತರಿಗೆ ತನ್ನ ಚಿತ್ರದ ಮೂಲಕ ಉಪದೇಶ ನೀಡಿ, ಆ ಮೂಲಕ ಸಮಾಜದಲ್ಲಿ ಭಕ್ತಿ, ಗೌರವ, ಶಾಂತಿ, ನೀತಿ, ನಿಯತ್ತು ಇವೆಲ್ಲವೂ ನೆಲಸಲು ಪರೋಕ್ಷವಾಗಿ ಕಾರಣವಾಗಿದ್ದ ಅವರನ್ನೂ ಮರೆಯುವುದುಂಟೇನು? ಛೇ! ಆಗದು.
ಹಿಂದೊಂದು ಕಾಲವಿತ್ತು, ಕನ್ನಡ ಚಿತ್ರವನ್ನು ವೀಕ್ಷಿಸಲು ಇತರ ಭಾಷೆಯ ಪ್ರಖ್ಯಾತ ನಟರು, ನಿರ್ದೇಶಕರು ಟಿಕೇಟು ಕಾದಿರಿಸುವಂತದ್ದು. ಅವರ ಸಾಲಿನಲ್ಲಿ ಶ್ರೇಷ್ಠ ನಟ ಕಮಲ್ ಹಾಸನ್ ಕೂಡ ಒಬ್ಬರಾಗಿದ್ದರು. ಅಂತಹ ಉತ್ತುಂಗಕ್ಕೆ ಕನ್ನಡ ಚಿತ್ರರಂಗವನ್ನು ಏರಿಸಿದವರಲ್ಲಿ ಬಹುಪಾಲಿನ ಶ್ರಮ ಡಾ. ರಾಜ್ ಕುಮಾರ್ ಅವರದ್ದೂ ಆಗಿತ್ತು.
ಆದರೆ ಆ ಹಿರಿಮೆಯನ್ನು ಒಂದು ಚೂರೂ ತೋರಿಸಿಕೊಳ್ಳದೆ ತನ್ನನ್ನು ಬೆಳೆಸಿದ ಅಭಿಮಾನಿಗಳಿಗೆ ದೇವರೆಂದು ಭಕ್ತರಂತೆ ಕೈಮುಗಿಯುತ್ತಿದ್ದ ಅವರ ದೊಡ್ಡಗುಣವನ್ನು ವಿವರಿಸಲು ಪದಗಳೇ ಸಾಲದು.
ಸಂಗೀತದ ವಿಷಯಕ್ಕೆ ಬಂದರೆ, ಕುಣಿಯುವಂತ ಹಾಡಿಗೆ ವೇದಿಕೆಯಲ್ಲೇ ಕುಣಿದು ಹಾಡುತ್ತಿದ್ದ ರಾಜ್ ಸಂಗೀತದಲ್ಲಿ ಅಷ್ಟೊಂದು ಲೀನವಾಗಿ ಹಾಡುತ್ತಿದ್ದರು. ಅವರ ಕೆಲವು ಗೀತೆಗಳನ್ನೇ ಅರ್ಥೈಸಿಕೊಂಡರೆ ಮಾಹಾಕಾವ್ಯಗಳ ಸಂಕ್ಷಿಪ್ತ ರೂಪವೇನೋ ಎನ್ನುವಂತಿದೆ.
ಅಂತಹ ಮಹಾನ್ ಕಲಾವಿದನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಕಡುಬಡತನದ ಹಾದಿಯಲ್ಲಿದೆ. ಡಾ.ರಾಜ್ ಹೆಸರಿನಲ್ಲಿ ಅವೆಷ್ಟೊ ಅಭಿಮಾನಿ ಸಂಘಟನೆಗಳು ಬಡವರಿಗೆ ಅನ್ನದಾನ ಕಾರ್ಯ ಮಾಡುತ್ತಿವೆ. ಒಬ್ಬ ಕಲಾವಿದನಿಂದ ಒಂದು ಸಮಾಜದಲ್ಲಿ ಇದಕ್ಕಿಂತ ದೊಡ್ಡ ಪರಿವರ್ತನೆ ಇನ್ನೇನು ಬೇಕಿದೆ.