ರಘು ಕಣ್ಣು ಕಿತ್ತ ಪ್ರೇಮ ಪ್ರಕರಣ ಶೀಘ್ರವೇ ಬೆಳ್ಳಿತೆರೆಗೆ!
PR
PR
ಪ್ರೀತಿಸಿದ ಯುವಕನನ್ನು ಕಟ್ಟಿಹಾಕಿ ಕಣ್ಣು ಕಿತ್ತ ಇತ್ತೀಚಿನ ಅಮಾನವೀಯ 'ರಘು ಕಣ್ಣು ಕಿತ್ತ ಪ್ರಕರಣ' ಬೆಳ್ಳಿತೆರೆಯಲ್ಲಿ ಬರಲಿದೆ. ನೈಜ ಕಥೆಯನ್ನು ತೆರೆಯ ಮೇಲೆ ತರುವ ಸಾಹಕ್ಕೆ ಕೈ ಹಾಕಿರುವವರು ಕನ್ನಡದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್.
ಇವರ 'ದುಷ್ಟ' ಚಿತ್ರ ಜೂನ್ ನಾಲ್ಕರಂದು ಬಿಡುಗಡೆಯಾಗಲಿದ್ದು, ನಂತರದ ಕೆಲವೇ ವಾರಗಳಲ್ಲಿ ಈ ದುರಂತ ಪ್ರಕರಣವನ್ನು 'ನೆನಪಿದೆಯಾ ಓ ಗೆಳತಿ' ಎಂಬ ಹೆಸರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಗುವುದು ಎಂದಿದ್ದಾರೆ.
'ದುಷ್ಟ' ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಇವರ ಪುತ್ರ ಪಂಕಜ್ ಈ ಚಿತ್ರದ ನಾಯಕ. ನಾಯಕಿಯ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಾರಾಯಣ್ ಚಿತ್ರದ ಕಥೆ ಬರೆಯಲು ಇದೇ ತಿಂಗಳ 25ರ ಸೋಮವಾರ ಪ್ರಾರಂಭಿಸಿದ್ದು, ಈ ಪ್ರಕರಣದ ಕುರಿತು ಸಂಪೂರ್ಣ ವಿವರ ಸಂಗ್ರಹಿಸಿ ಕಥೆ ಬರೆದು, ಅದಕ್ಕೆ ಒಪ್ಪುವಂತ ನಾಯಕಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಈಗಾಗಲೇ ದೃಶ್ಯ ಮಾದ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಮಾಡಿದ್ದ ಈ ಪ್ರಕರಣ ಕುರಿತು ಕಣ್ಣು ಕಳೆದುಕೊಂಡ ರಘು ಚಿಕಿತ್ಸೆ ಪಡೆಯುತ್ತಿರುವ ವೈದ್ಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಸಿದ್ದೇನೆ. ಹಾಗೂ ಪತ್ರಿಕೆಗಳಲ್ಲಿ ಬಂದ ವರದಿಯಿಂದ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದೇನೆ ಎಂದಿದ್ದಾರೆ ನಾರಾಯಣ್.
ಕರುಳು ಕಿತ್ತುಬರುವಂತ ಈ ಪ್ರೀತಿ ಪರಾಕಾಷ್ಠೆಯನ್ನು ತೆರೆಯ ಮೇಲೆ ತರುವಾಗ ಅದು ಯಾವುದೇ ಕಾರಣಕ್ಕೂ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಬಾರದು ಎಂಬ ಎಚ್ಚರಿಕೆಯಿಂದ ಈ ಚಿತ್ರವನ್ನು ತಯಾರಿಸುವುದಾಗಿ ನಾರಾಯಣ್ ತಿಳಿಸಿದ್ದಾರೆ.
ಪ್ರೀತಿಯ ಹೆಸರಿನಲ್ಲಿ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವ ಇಂದಿನ ಯುವ ಪೀಳಿಗೆಗೆ ಅರ್ಥವಾಗುವ ರೀತಿಯಲ್ಲಿ ಉತ್ತಮ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.
ಆಸೆ, ಪ್ರೀತಿ, ದ್ವೇಷ ಎಲ್ಲವೂ ಮಿತಿಯಾಗಿರಬೇಕು, ಅದು ಅತಿಯಾದರೆ ಅನಾಹುತಕ್ಕೆ ಕಾರಣವಾಗುತ್ತದೆ ಎಂಬ ಸಂದೇಶವನ್ನೂ ಇದೇ ವೇಳೆ ಅವರು ತಿಳಿಸಿದರು.