ತಮಿಳಿನ ಸೂಪರ್ ಹಿಟ್ 'ನಾಡೋಡಿಗಳ್' ಚಿತ್ರದ ರಿಮೇಕ್ ಎಂದೊಡನೆ ಅಭಿಮಾನಿಗಳಲ್ಲಿ ವಿಶೇಷ ಆಸಕ್ತಿ ಕೆರಳಿಸಿದೆ. ಜತೆಗೆ ಚಿತ್ರದ ಪಾತ್ರಕ್ಕೆ ಸೂಕ್ತವಾದ ನಾಯಕ ನಟರನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಕನ್ನಡದಲ್ಲಿ ಈ ಚಿತ್ರ ಸೂಪರ್ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದೆ ಗಾಂಧಿನಗರ.
ಮೂವರು ಆತ್ಮೀಯ ಗೆಳೆಯರು ತಮ್ಮ ಸ್ನೇಹಿತನೋರ್ವ ಪ್ರೀತಿಯ ಬಲೆಯಲ್ಲಿ ಬಿದ್ದು ಸಂಕಷ್ಟದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿರುವಾಗ, ಪ್ರೇಮಿಗಳಿಬ್ಬರು ಒಂದಾಗಲು ಹರಸಾಹಸ ಪಟ್ಟು ಅವರನ್ನು ಬೇರೊಂದು ಊರಿನಲ್ಲಿ ಉಳಿಯಲು ವ್ಯವಸ್ಥೆ ಮಾಡುತ್ತಾರೆ. ಆ ಮೂಲಕ ಅವರ ಪ್ರೀತಿಗೆ ತಮ್ಮ ಸ್ನೇಹದ ಜವಾಬ್ದಾರಿಯುತ ನೆರವು ನೀಡುತ್ತಾರೆ.
ಆದರೆ ಪ್ರೀತಿಸಿದ ಹುಡುಗ-ಹುಡುಗಿ ಮದುವೆ ಆಗಿ ಕೆಲದಿನಗಳಲ್ಲೇ ಪ್ರೀತಿಯ ಬಗ್ಗೆ ಆಸಕ್ತಿ ಕಳೆದುಕೊಂಡು ತಾವಿಬ್ಬರೂ ಬೇರೆಯಾಗೋಣ ಎಂಬ ಒಮ್ಮತದ ನಿರ್ಧಾರಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಪತಿ-ಪತ್ನಿಯಾಗಿದ್ದ ಪ್ರೇಮಿಗಳು ತಮ್ಮ ಸ್ನೇಹಿತರು ತಮಗಾಗಿ ಅನುಭವಿಸಿದ ಕಷ್ಟ, ನೋವು ಎಲ್ಲವನ್ನೂ ಮರೆತಿರುತ್ತಾರೆ.
ಪ್ರೀತಿ ಎಂದರೆ ಇವತ್ತು ಒಂದಾಗಿ ನಾಳೆ ಬೇರೆಯಾಗುವುದಲ್ಲ ಎಂದು ಈ ಮೂವರು ಗೆಳೆಯರು ಖಾರವಾಗಿ ಮನವರಿಕೆ ಮಾಡಿಕೊಡುವ ವಿಷಯ ಈ ಚಿತ್ರದಲ್ಲಿದೆ. ಇಂದಿನ ಯುವಜನರು ಪ್ರೀತಿ, ಪ್ರೇಮದ ಮೂಲ ಅರ್ಥ ತಿಳಿಯದೆ ಯೌವನ ಚಿಗುರಿದಾಗ ಮನಸಿನಲ್ಲಾಗುವ ಬದಲಾವಣೆಯನ್ನು ಪ್ರೀತಿ ಎಂದು ಅರಿತು ತಮ್ಮ ಆತ್ಮೀಯ ಸ್ನೇಹಿತರಿಗೆ ಮಾಡುವ ನಂಬಿಕೆ ದ್ರೋಹಕ್ಕೆ ಇಲ್ಲಿ ಪರಿಣಾಮಕಾರಿಯಾದ ಪ್ರತಿಕಾರ ಸಂದೇಶ ಸಿಗುತ್ತದೆ ಎಂಬುದು ಅಭಿಮಾನಿಗಳ ನಿರೀಕ್ಷೆ.
'ಹುಡುಗರು' ಚಿತ್ರದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿರುವುದರಿಂದ ಹಾಗೂ ಮಾದೇಶ್ ಅವರು ಚಿತ್ರವನ್ನು ನಿರ್ದೇಶಿಸುತ್ತಿರುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರಲಿದೆ ಎಂಬ ಬಹುನಿರೀಕ್ಷೆ ಕನ್ನಡ ಚಿತ್ರರಂಗದಲ್ಲಿದೆ.