ಈಗಾಗಲೇ ಸಾಕಷ್ಟು ಸಾಹಸಕ್ಕೆ ಕೈಹಾಕಿರುವ 'ಗಾಡ್ ಫಾದರ್' ನಿರ್ಮಾಪಕ ಕೆ.ಮಂಜು ಈಗ ಮತ್ತೊಂದು ಮಹತ್ವದ ಸಾಹಸಕ್ಕೆ ಪ್ರಯತ್ನಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಪ್ರಪಥಮ ಬಾರಿಗೆ ಆಸ್ಕರ್ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನು ಕರೆತರುವ ಪ್ರಯತ್ನ ನಡೆಸಿದ್ದಾರೆ.
ಇದು 'ಗಾಡ್ ಫಾದರ್' ಚಿತ್ರಕ್ಕೆ ನೀಡುತ್ತಿರುವ ಗಿಮಿಕ್ ಪ್ರಚಾರ ತಂತ್ರ ಅಲ್ಲ ಎಂಬುದಾಗಿ ನಂಬಲರ್ಹ ಮೂಲಗಳು ತಿಳಿಸಿವೆ. ಆದ್ದರಿಂದ ಎ.ಆರ್. ರೆಹಮಾನ್ ಅದೆಷ್ಟೇ ಬಿಡುವಿಲ್ಲದೇ ಇದ್ದರೂ ಅವರಿಗಾಗಿ ಕಾದು, ಎಷ್ಟೇ ಖರ್ಚಾದರೂ ತೊಂದರೆಯಿಲ್ಲ 'ಗಾಡ್ ಫಾದರ್'ಗೆ ಅವರೇ ಸಂಗೀತ ನೀಡಬೇಕೆಂಬ ಹಠದಲ್ಲಿದ್ದಾರೆ ಚಿತ್ರದ ನಿರ್ಮಾಪಕರು.
'ಗಾಡ್ ಫಾದರ್'ನ ಮೂಲ ಚಿತ್ರ ತಮಿಳಿನ 'ವರಲಾರು' ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದರಿಂದ ಅದೇ ಚಿತ್ರದ ಸಂಗೀತವನ್ನು ಡಬಿಂಗ್ ಮಾಡಲಾಗುತ್ತಿದೆ ಎಂಬ ಮಾತೂ ಕೇಳಿಬಂದಿತ್ತು. ಈ ರೀತಿಯ ಡಬಿಂಗ್ ಸಂಗೀತವನ್ನು ಈ ಹಿಂದೆ 'ಸಜನಿ' (ತಮಿಳಿನ 'ಜೋಡಿ') ಚಿತ್ರಕ್ಕೆ ತರಲಾಗಿದೆ.
ಆದ್ದರಿಂದ 'ಗಾಡ್ ಫಾದರ್' ಚಿತ್ರಕ್ಕೆ ಎ.ಆರ್. ರೆಹಮಾನ್ ಅವರಿಂದ ಹೊಸ-ಹೊಸ ರಾಗ ಸಂಯೋಜನೆ ಮಾಡಿಸುವುದಾಗಿ ನಟ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ 'ಗಾಡ್ ಫಾದರ್' ಚಿತ್ರ ಸ್ಯಾಂಡಲ್ ವುಡ್‌ನಲ್ಲಿ ಇತಿಹಾಸ ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದೆ ಗಾಂಧಿನಗರ.