'ಸಂಜು ವೆಡ್ಸ್ ಗೀತಾ' ಚಿತ್ರ ನಿರೀಕ್ಷೆಗೆ ಮೀರಿ ಗೆಲುವು ಸಾಧಿಸಿದೆ. ಚಿತ್ರ ನೋಡಿದವರೆಲ್ಲಾ ಸಂಜು-ಗೀತಾ ಪ್ರೀತಿಗೆ ತಲೆದೂಗಿದ್ದಾರೆ. ಪರಿಣಾಮವಾಗಿ ಚಿತ್ರ ಐವತ್ತು ದಿನಗಳನ್ನು ದಾಟಿ ಮುನ್ನುಗ್ಗುತ್ತಿದೆ. ಒಮ್ಮೆ ನೋಡಿದವರು ಇನ್ನೊಮ್ಮೆ, ಇನ್ನೊಮ್ಮೆ ನೋಡಿದವರು ಮಗದೊಮ್ಮೆ ಈ ಚಿತ್ರವನ್ನು ನೋಡುತ್ತಲೇ ಇದ್ದಾರೆ.
'ಸಂಜು ವೆಡ್ಸ್ ಗೀತಾ' ಬಿಡುಗಡೆಯ ಮುಂಚಿನ ದಿನದ ವರೆಗೂ ಸಾಲ ಸಾಲ ಸಾಲ. ಅದೆನೇ ಇದ್ದರೂ ಚಿತ್ರ ಈಗ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಕಳೆದ ನಾಲ್ಕು ವಾರಗಳಲ್ಲಿ ಈ ಚಿತ್ರ ಬರೋಬ್ಬರಿ ನಾಲ್ಕು ಕೋಟಿ ಅರುವತ್ತು ಲಕ್ಷ ರೂಪಾಯಿ ಸಂಪಾದಿಸಿದೆ.
ಹಾಗಾಗಿ ಚಿತ್ರದ ಬಗೆಗಿನ ಮಾತುಕತೆಗಳೂ ಹೆಚ್ಚಾಗಿವೆ. ಇದೇ ಖುಷಿಯಲ್ಲಿ ಮಾತಿಗಿಳಿಯುವ ನಾಗಶೇಖರ್, ಗಾಂಧಿನಗರದಲ್ಲಿ ಅನೇಕ ಮಂದಿ ಈ ಸಿನೆಮಾದ ಬಗ್ಗೆ ಕುಹಕವಾಡಿದ್ದನ್ನು ನೆನಪಿಸಿಕೊಂಡರು. ರೀ ಆ ಸಿನೆಮಾ ಓಡಲ್ಲ ಬಿಡ್ರೀ, ಸುಮ್ನೇ ಯಾಕ್ರೀ ರಿಸ್ಕು ಎಂದು ಚಿತ್ರದ ವಿತರಕ ಭಾಷಾ ಅವರ ಕಿವಿಯನ್ನೇ ಹಿಂಡಿದ್ದರು. ಆದರೆ ಭಾಷಾ ಮಾತ್ರ ಅಂಥ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಕೈಯಿಂದ ಕಾಸು ಹಾಕಿ ಸಿನೆಮಾ ಬಿಡುಗಡೆ ಮಾಡಿಯೇ ಬಿಟ್ಟರು.
ಆದರೆ ದೇವರು ಕೈ ಬಿಡಲಿಲ್ಲ. ಚಿತ್ರ ಕ್ಲಿಕ್ ಆಯಿತು ಎನ್ನುತ್ತಾ ಭಾವುಕರಾಗುತ್ತಾರೆ ನಾಗಶೇಖರ್. ಸಿನೆಮಾ ಬಿಡುಗಡೆ ಸಂದರ್ಭದಲ್ಲಿ 35 ಸಾವಿರ ರೂಪಾಯಿಗೂ ಅವರು ಒದ್ದಾಡಿದ್ದಾರೆ. ಈಗ ಗಾಂಧಿನಗರದಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ನಾಗಶೇಖರ್ ತಮ್ಮ ಸ್ನೇಹಿತರ ಬಳಿ ಸಾಲ ಕೇಳಿದರೂ ಅವರಿಗೆ ದುಡ್ಡು ಕೊಡುವ ಧೈರ್ಯ ಬರಲಿಲ್ಲವಂತೆ. ಇದೇ ವೇಳೆ ಫೈನಾನ್ಸಿಯರ್ ತನ್ನ ಕಾರನ್ನು ಸೀಜ್ ಮಾಡಿದ್ದನ್ನೂ ಅವರು ಮೆಲುಕು ಹಾಕಿದರು. ಆ ವೇಳೆ ನಾಯಕಿ ನಟಿ ರಮ್ಯಾ ಹತ್ತು ಲಕ್ಷ ರೂಪಾಯಿ ನೀಡಿ ಸಹಾಯ ಮಾಡಿದ್ದನ್ನು ನಾಗಶೇಖರ್ ನೆನೆಸಿಕೊಂಡರು.
ನಾಯಕಿ ರಮ್ಯಾ ಕೂಡಾ ಈ ಯಶಸ್ಸಿನಿಂದ ಖುಷಿಯಾಗಿದ್ದಾರೆ. ಒಂದು ಒಳ್ಳೆಯ ಚಿತ್ರವನ್ನು ಜನ ಮೆಚ್ಚಿಕೊಂಡ ಪರಿ ಅವರನ್ನು ಬೆರಗುಗೊಳಿಸಿತ್ತು. `ತುಂಬಾ ಖುಷಿಯಾಗುತ್ತಿದೆ. ಎಲ್ಲಿ ನೋಡಿದರೂ ನಮ್ಮ ಸಿನೆಮಾ ಹಾಡುಗಳೇ ಕೇಳಿಬರುತ್ತಿವೆ. ಅನೇಕ ಮಂದಿ ಕರೆಗಳನ್ನು ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ನಮ್ಮವರೆಲ್ಲರೂ ಈ ಸಿನೆಮಾಕ್ಕಾಗಿ ಬಹಳಷ್ಟು ಕಷ್ಟಪಟ್ಟಿದ್ದಾರೆ. ಆ ಕಷ್ಟಕ್ಕೊಂದು ಫಲ ಸಿಕ್ಕಿದೆ ಎಂದರು ರಮ್ಯಾ.