ಶೀಘ್ರದಲ್ಲೇ ನಿಮಗೆ ಕೃಷ್ಣನ ಮದುವೆಯ ಸಿಹಿಯೂಟ ಲಭ್ಯ! 'ಕೃಷ್ಣನ್ ಲವ್ ಸ್ಟೋರಿ' ಯಶಸ್ವಿ ಚಿತ್ರದ ಸ್ಪೂರ್ತಿಯಿಂದ ತಯಾರಾಗಿರುವ ಮತ್ತೊಂದು ಚಿತ್ರ 'ಕೃಷ್ಣನ್ ಮ್ಯಾರೇಜ್ ಸ್ಟೋರಿ'. ಅಜಯ್‌ರಾವ್, ನಿಧಿ ಸುಬ್ಬಯ್ಯ ಪ್ರಧಾನ ಪಾತ್ರಗಳಲ್ಲಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ.
ಹೆಸರಿಗೆ ತಕ್ಕಂತೆ ಇದೊಂದು ಕೌಟುಂಬಿಕ ಚಿತ್ರ. ನಾಯಕನದು ದೊಡ್ಡ ಫ್ಯಾಮಿಲಿ. ಆತನಿಗೆ ಜಾಹೀರಾತು ಕಂಪೆನಿಯೊಂದರಲ್ಲಿ ಕೆಲಸ. ಅವನಿಗೆ ಬೇಗನೆ ಒಂದು ಮದುವೆ ಮಾಡಿ ಮುಗಿಸಬೇಕೆಂಬುದು ಮನೆಯವರ ಹಂಬಲ. ಎಲ್ಲರೂ ಸೇರಿ ವಧು ಬೇಟೆಗೆ ಹೊರಡುತ್ತಾರೆ. ಅವರ ಅಪೇಕ್ಷೆಯ ಆ ಒಳ್ಳೆಯ ಹುಡುಗಿ ಸಿಗುತ್ತಾಳೋ ಇಲ್ಲವೋ ಎಂಬುದೇ ಈ ಚಿತ್ರದ ಕಥೆ. ಒಟ್ಟಿನಲ್ಲಿ ಒಂದು ಸಿಂಪಲ್ ಸ್ಟೋರಿ ಎನ್ನುತ್ತಾರೆ ನಿರ್ದೇಶಕ ಉಮೇಶ್.
ಚಿತ್ರಕ್ಕೆ ಜೈಜಗದೀಶ್, ವಿನಯಾ ಪ್ರಸಾದ್, ಬಾಲರಾಜ್, ಸಂಗೀತ, ನಾಗೇಂದ್ರ ಷಾ, ಭಾರ್ಗವಿ ನಾರಾಯಣ್, ಸಂಧ್ಯಾ, ಸ್ವಯಂವರ ಚಂದ್ರು ಮುಂತಾದ ಹಲವು ಒಳ್ಳೆಯ ಕಲಾವಿದರೇ ಸಿಕ್ಕಿದ್ದಾರೆ. ಮೊದಲ ಚಿತ್ರದಲ್ಲೇ ಅಂಥವರನ್ನೆಲ್ಲ ನಿರ್ದೇಶಿಸಿದ್ದು ನಿಜವಾಗಲೂ ಸವಾಲಿನದಾಗಿತ್ತು ಎಂದು ಉಮೇಶ್ ನೆನಪಿಸಿಕೊಳ್ಳುತ್ತಾರೆ.
ಚಿತ್ರಕ್ಕೆ ಐವತ್ತು ದಿನಗಳ ಕಾಲ ಸಕಲೇಶಪುರ, ಮೂಡುಬಿದ್ರೆ, ಬೆಂಗಳೂರು, ಬ್ಯಾಂಕಾಕ್‌ಗಳಲ್ಲಿ ಚಿತ್ರೀಕರಣ ನಡೆಸಲಾಗಿರುತ್ತದೆ. ಬ್ಯಾಂಕಾಕ್‌ನಲ್ಲಿ ಎರಡು ಹಾಡುಗಳನ್ನು ಚಿತ್ರಿಸಲಾಗಿದೆ. 'ಕೃಷ್ಣನ್ ಲವ್ ಸ್ಟೋರಿಯಲ್ಲಿ ಸುಂದರ ಹಾಡುಗಳನ್ನು ನೀಡಿರುವ ಶ್ರೀಧರ್ ಸಂಭ್ರಮ್ ಅವರೇ ಈ ಚಿತ್ರದಲ್ಲೂ ಅತ್ಯುತ್ತಮ ಹಾಡುಗಳನ್ನು ಕೊಟ್ಟಿದ್ದಾರೆ ಎಂಬುದು ಉಮೇಶ್ ಅಭಿಮತ. ಅಲ್ಲಿನ ಶೇಖರ್ ಚಂದ್ರ ಅವರೇ ಇಲ್ಲೂ ಕ್ಯಾಮರಾ ಹಿಡಿದಿದ್ದಾರೆ. ಒಟ್ಟಾರೆ ಚಿತ್ರ ತಂಡದ ಪ್ರತಿಯೊಬ್ಬರೂ ಮತ್ತೊಂದು ದೊಡ್ಡ ಯಶಸ್ಸಿನ ನೀರೀಕ್ಷೆಯಲ್ಲಿದ್ದಾರೆ.
ನಾಯಕ ಅಜಯ ರಾವ್ ತಾವು ತುಂಬಾ ಇಷ್ಟಪಟ್ಟು ಪಾತ್ರ ಮಾಡಿದ ಚಿತ್ರಗಳಲ್ಲಿ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಕೂಡಾ ಒಂದು ಎನ್ನುತ್ತಾರೆ. ಇಲ್ಲೂ ನನ್ನ ಪಾತ್ರ ಮೆಚೂರ್ಡ್. ಇಲ್ಲಿ ನಾನು ಆಡ್ ಫಿಲಂ ಡೈರೆಕ್ಟರ್. ಸುತ್ತಮುತ್ತ ಒಂದಷ್ಟು ಲಲನೆಯರು. ಈ ಕೃಷ್ಣ ಸದಾ ಗ್ಲಾಮರ್ ಪ್ರಪಂಚದಲ್ಲೇ ಇರುವವನು. ಆದರೆ ಅಲ್ಲಿದ್ದರೂ ಅವನ ಮನಸ್ಸು ಸದಾ ಕುಟುಂಬದ ಬಗ್ಗೆಯೇ ತುಡಿಯುತ್ತಿರುತ್ತೆ ಎಂದು ಕಥೆಯ ವಿವರ ಒದಗಿಸಿದರು ಅಜಯ್ ರಾವ್. ಅವರ ಪ್ರಕಾರ ಈ ಚಿತ್ರ ಎಲ್ಲೂ ಬೋರ್ ಹೊಡಿಸುವುದಿಲ್ಲವಂತೆ.
ನಾಯಕಿ ನಿಧಿ ಸುಬ್ಬಯ್ಯ 'ಪಂಚರಂಗಿ ತರಹ ತಾನು ತುಂಬಾ ನಿರೀಕ್ಷೆ ಇಟ್ಟಿರುವ ಚಿತ್ರ ಇದು ಎನ್ನುತ್ತಾರೆ. 'ಇಲ್ಲೂ ನಾನು ತುಂಟಿ. ಒಂದರ್ಥದಲ್ಲಿ ನಾನು ನಿಜ ಜೀವನದಲ್ಲಿ ಹೇಗಿರುವೆನೋ ಹಾಗೆಯೇ ನನ್ನ ಪಾತ್ರವಿದೆ. ಚಿತ್ರೀಕರಣದ ಅನುಭವವಂತೂ ಸೂಪರ್. ಇಲ್ಲೂ ಅವಿಭಕ್ತ ಕುಟುಂಬದಂತೆ ಎಲ್ಲರೂ ಜೊತೆಯಾಗಿ ಖುಷಿ ಖುಷಿಯಾಗಿದ್ದೆವು ಎನ್ನುತ್ತಾರೆ ಅವರು.
ಈ ಚಿತ್ರದಲ್ಲಿ ಫ್ಯಾಮಿಲಿ, ಯೂಥ್ ಇಷ್ಟಪಡುವಂಥ ಎಲ್ಲಾ ರೀತಿಯ ಹಾಡುಗಳನ್ನೂ ಕೊಟ್ಟಿದ್ದಾಗಿ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಹೇಳಿಕೊಳ್ಳುತ್ತಾರೆ. 'ನಾನು ಈ ಚಿತ್ರಕ್ಕೆ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದೇನೆ ಎನ್ನುವುದಕ್ಕಿಂತ ಚಿತ್ರದ ಕಥೆಯೇ ನನ್ನಿಂದ ಒಳ್ಳೆಯ ಕೆಲಸ ತೆಗೆದುಕೊಂಡಿದೆ ಎನ್ನುವುದು ಹೆಚ್ಚು ಸೂಕ್ತ. ಏಕೆಂದರೆ ಚಿತ್ರದ ಕಥೆಯಲ್ಲಿ ಅಂಥದ್ದೊಂದು ಸತ್ವವಿದೆ ಎನ್ನುತ್ತಾರೆ ಅವರು.
'ಕೃಷ್ಣನ್ ಲವ್ ಸ್ಟೋರಿ'ಯಲ್ಲಿ ಸೋನು ನಿಗಮ್ ಹಾಡಿದ ಹಾಡುಗಳು ಸಾಕಷ್ಟು ಜನಪ್ರಿಯವಾಗಿದ್ದವು. ಹಾಗಾಗಿ ಈ ಚಿತ್ರದಲ್ಲೂ ಸೋನು ನಿಗಮ್ ಮತ್ತು ಶ್ರೇಯಾ ಘೋಶಾಲ್ ಜೊತೆ ರಾಜೇಶ್ ಕೃಷ್ಣನ್, ಲಕ್ಷ್ಮೀ ಮನಮೋಹನ್ ಮುಂತಾದವರೂ ಹಾಡಿದ್ದಾರೆ. ಇದೇ ಮೊದಲ ಬಾರಿಗೆ ಆಲ್ಬಂ ಗಾಯಕ ಮಿಕಾ ಸಿಂಗ್ ಒಂದು ಹಾಡು ಹಾಡಿದ್ದಾರೆ. ಅವರಲ್ಲದೆ ಸಂತೋಷ್ ಮತ್ತು ಹರ್ಷಾ ಸದಾನಂದ್ ಎಂಬ ಹೊಸಬರಿಂದಲೂ ಹಾಡಿಸಲಾಗಿದೆ. ಜಯಂತ್ ಕಾಯ್ಕಿಣಿ , ಕವಿರಾಜ್, ಶಶಾಂಕ್ ಒಟ್ಟು ಆರು ಹಾಡುಗಳು ಹಾಗೂ ಜೊತೆಗೆ ಒಂದು ಬಿಟ್ ಒದಗಿಸಿದ್ದಾರೆ.