'ರಾಜಧಾನಿ ಎಂಬ ಹೆಸರಿನ ಕನ್ನಡ ಚಿತ್ರ ಬಿಡುಗಡೆಗೆ ಮುನ್ನವೇ ದೊಡ್ಡ ಸುದ್ದಿ ಮಾಡುತ್ತಿದೆ. ಮೂಲತಃ ಕನ್ನಡದಲ್ಲಿ ತಯಾರಾಗಿರುವ ಈ ಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗಿ ಅದು ಎಷ್ಟರಮಟ್ಟಿಗೆ ಜನಮನ್ನಣೆ ಪಡೆಯುತ್ತದೆ ಎಂಬುದರ ಆಧಾರದ ಮೇಲೆ ಚಿತ್ರಕ್ಕೆ ಡಬ್ಬಿಂಗ್ ಅಥವಾ ರೀಮೇಕ್ ಡಿಮಾಂಡ್ ಬರುತ್ತದೆ. ಆದರೆ 'ರಾಜಧಾನಿ ಚಿತ್ರಕ್ಕೆ ಬಿಡುಗಡೆಗೆ ಮೊದಲೇ ಡಬ್ಬಿಂಗ್ ಮತ್ತು ರೀಮೇಕ್ ಬೇಡಿಕೆಗಳು ಬರುತ್ತಲಿವೆ.
ಕೆ. ವಿ.ರಾಜು ಅವರ ಅನುಭವ, ಜಾಣ್ಮೆಯ ಫಲವಾಗಿ 'ರಾಜಧಾನಿ ಚಿತ್ರ ರೂಪುಗೊಂಡಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಎಂತೆಂತಹ ಕೃತ್ಯಗಳು ನಡೆಯುತ್ತವೆ ಎಂಬ ಆಘಾತಕಾರಿ ಅಂಶಗಳು 'ರಾಜಧಾನಿ' ಚಿತ್ರದಲ್ಲಿವೆ. ಚಿತ್ರಕ್ಕೆ ಕೆ.ವಿ.ರಾಜು ಅವರು ತುಂಬಾ ಪವರ್‌ಫುಲ್ ಡೈಲಾಗ್ಸ್ ಬರೆದಿದ್ದಾರಂತೆ.
ಎನ್. ಆರ್.ಸೌಮ್ಯ ಸತ್ಯನ್ ನಿರ್ಮಿಸಿರುವ ಈ ಚಿತ್ರದಲ್ಲಿ ಯಶ್, ಸತ್ಯ, ಚೇತನ್‌ಚಂದ್ರ , ರವಿತೇಜ ಮತ್ತು ಸಂದೀಪ್ ಎಂಬ ಪಂಚ ಪಾಂಡವರಿಗೆ ಪ್ರಮುಖ ಪಾತ್ರ. ಮಹಾನಗರದ ನಾಗರಿಕರು ಸುಖ ನಿದ್ದೆಯಲ್ಲಿರುವಾಗ ಈ ಐವರು ಏನು ಮಾಡುತ್ತಾರೆ ಅನ್ನುವುದನ್ನು ರಾಜು ಅವರು ಸೊಗಸಾಗಿ ನಿರೂಪಿಸಿದ್ದಾರಂತೆ.
ರಮೇಶ್ ಭಟ್, ಶರತ್ ಲೋಹಿತಾಶ್ವ, ತುಳಸಿ, ಸುನೇತ್ರಾ ಪಂಡಿತ್, ರಾಜು ತಾಳಿಕೋಟೆ ಮುಂತಾದ ಕಲಾವಿದರ ದಂಡೇ ರಾಜಧಾನಿಯಲ್ಲಿದೆ. ಚಿತ್ರದ ನಾಯಕಿ ಶೀನಾ ಶಹಬಾದಿ. ಇದೆಲ್ಲಕ್ಕಿಂತ ಮಿಗಿಲಾಗಿ ನೆರೆ ರಾಜ್ಯಗಳ ನಿರ್ಮಾಪಕರ ಗಮನ ಸೆಳೆದಿರುವುದು ಪ್ರಕಾಶ್ ರೈ. ಈ ಕಲಾವಿದ ಎಂಥ ಪ್ರತಿಭಾವಂತ ಎಂದು ಇಲ್ಲಿ ವಿವರಿಸುವ ಅಗತ್ಯವಿಲ್ಲ. ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವುದು ಈ ದೈತ್ಯ ಪ್ರತಿಭೆಗೆ ನಿದರ್ಶನ.
ತಮಿಳು, ತೆಲುಗು ಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿರುವ ರೈ 'ರಾಜಧಾನಿ ಚಿತ್ರದಲ್ಲಿ ಅಭಿನಯಿಸಲು ಆದ್ಯತೆಯ ಮೇಲೆ ಡೇಟ್' ನೀಡಿದ್ದರಂತೆ. ಈ ಕನ್ನಡ ಚಿತ್ರದ ಬಗ್ಗೆ ಪ್ರಕಾಶ್ ರೈ ಇಷ್ಟೊಂದು ಕಾಳಜಿ ವಹಿಸಿದ್ದೇಕೆ ಎಂಬ ಪ್ರಶ್ನೆಗೆ ನೆರೆ ರಾಜ್ಯಗಳ ಚಿತ್ರ ತಯಾರಕರು ಉತ್ತರ ಹುಡುಕಲಾರಂಭಿಸಿದಾಗ ಅವರಿಗೆ ದೊರೆತ ಮಾಹಿತಿ ಪ್ರಕಾರ ಪ್ರಕಾಶ್ ರೈ ಅವರೇ 'ರಾಜಧಾನಿ ಚಿತ್ರದ ರೀಯಲ್ ಹೀರೋ ಅಂತೆ. ಮೇಲಾಗಿ ಇವರ ಪಾತ್ರಕ್ಕೆ ಚಿತ್ರದಲ್ಲಿ ಭಾರೀ ಮಹತ್ವವಿದೆಯಂತೆ. ತಮ್ಮ ಪ್ರತಿಭೆಗೆ ಸವಾಲೆನಿಸುವ ಪಾತ್ರದಲ್ಲಿ ರೈ ಅಮೋಘವಾಗಿ ನಟಿಸಿದ್ದು ಇವರಿಗೆ ಚಿತ್ರದ ಐವರು ನಾಯಕರು ಹಾಗೂ ನಾಯಕಿ ಉತ್ತಮ ಸಪೋರ್ಟ್ ನೀಡಿದ್ದಾರಂತೆ.
ಇಷ್ಟು ಮಾಹಿತಿ ಕಲೆ ಹಾಕಿದ ನೆರೆ ರಾಜ್ಯದವರು ಸುಮ್ಮನಿರುತ್ತಾರೆಯೇ? ಸಿನೆಮಾ ಬಿಡುಗಡೆ ಆಗುವ ಮೊದಲೇ ಡಬ್ಬಿಂಗ್ ಅಥವಾ ರೀಮೇಕ್ ಹಕ್ಕು ಖರೀದಿಸೋಣ ಎಂಬ ಉದ್ದೇಶದಿಂದ ನಿರ್ಮಾಪಕಿ ಸೌಮ್ಯ ಸತ್ಯನ್ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ.
ನೀವೆಷ್ಟು ಕೇಳುತ್ತೀರೋ ಅಷ್ಟು ಹಣವನ್ನು ಈಗಲೇ ಕೊಡ್ತೇವೆ. ದಯವಿಟ್ಟು ನಮಗೆ ರೈಟ್ಸ್ ಕೊಡಿ ಎಂದು ತೆಲುಗಿನ ಹೆಸರಾಂತ ಚಿತ್ರ ನಿರ್ಮಾಪಕರೋರ್ವರು ದುಂಬಾಲು ಬಿದ್ದಿದ್ದಾರಂತೆ!