ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬೇಡಿಕೆಯಲ್ಲಿರುವ ನಟಿಯರ ಸಾಲಿನಲ್ಲಿ ರಾಗಿಣಿ ದ್ವಿವೇದಿ ಮಂಚೂಣಿಯಲ್ಲಿದ್ದಾರೆ. ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗಗಳಿಂದಲೂ ರಾಗಿಣಿಗೆ ಈಗ ಒಳ್ಳೆಯ ಅವಕಾಶಗಳು ಬರುತ್ತಲಿವೆ. ಹಾಗಂತ ಕನ್ನಡದಲ್ಲೇನೂ ಕಡಿಮೆಯಾಗಿಲ್ಲ. ಇಲ್ಲೂ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳಲ್ಲಿ ರಾಗಿಣಿಗೆ ಅವಕಾಶ ಸಿಗುತ್ತಿವೆ.
ಇತ್ತೀಚೆಗಷ್ಟೇ 'ಕೆಂಪೇಗೌಡನ ಜೊತೆ ಹಾಡಿ ಕುಣಿದ ರಾಗಿಣಿ ಈಗ ಶಿವರಾಜ್‌ಕುಮಾರ್ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ 'ಶಿವ' ಚಿತ್ರಕ್ಕೆ ರಾಗಿಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಓಂಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರಕ್ಕೆ ರಾಗಿಣಿ ನಾಯಕಿಯಾಗುವ ಮೂಲಕ, ಮೊದಲ ಬಾರಿಗೆ ಶಿವಣ್ಣ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕೆ.ಪಿ.ಶ್ರೀಕಾಂತ್ ಈ ಚಿತ್ರದ ನಿರ್ಮಾಪಕರು. ಜೂನ್ ಹತ್ತಕ್ಕೆ 'ಶಿವ' ಸೆಟ್ಟೇರಲಿದೆ.
ಇಷ್ಟೇ ಅಲ್ಲದೆ ಇನ್ನೊಂದಿಷ್ಟು ದೊಡ್ಡ ನಿರ್ದೇಶಕರ, ನಟರ ಚಿತ್ರಗಳಿಗೂ ರಾಗಿಣಿಯ ಹೆಸರು ಕೇಳಿ ಬರುತ್ತಿದೆ. ಪಿ.ವಾಸು ಅವರು ಉಪ್ಪಿಗೆ ನಿರ್ದೇಶಿಸಲಿರುವ ಚಿತ್ರಕ್ಕೂ ರಾಗಿಣಿಯ ಹೆಸರು ಸದ್ದು ಮಾಡುತ್ತಿದೆ. ಜೊತೆಗೆ ಎಂ.ಎಸ್.ರಮೇಶ್ ಅವರು ನಾಯಕ ಆದಿತ್ಯಗೆ ನಿರ್ದೇಶಿಸಲಿರುವ ಚಿತ್ರಕ್ಕೂ ರಾಗಿಣಿಯೇ ನಾಯಕಿ ಎಂಬ ಸುದ್ದಿಯೂ ಇದೆ. ಮಾತ್ರವಲ್ಲದೆ ಎನ್. ಕುಮಾರ್ ಅವರ ಮುಂದಿನ ಚಿತ್ರವೊಂದಕ್ಕೂ ರಾಗಿಣಿ ಜೊತೆ ಮಾತುಕತೆ ನಡೆದಿದೆ. ಆದರೆ ಅದಿನ್ನೂ ಫೈನಲ್ ಆಗಿಲ್ಲ.
ಇವಿಷ್ಟೇ ಅಲ್ಲದೆ ತಮಿಳು ಹಾಗೂ ತೆಲುಗು ಚಿತ್ರರಂಗಗಳಿಂದಲೂ ರಾಗಿಣಿಗೆ ಒಂದಷ್ಟು ಅವಕಾಶಗಳು ಬರುತ್ತಲಿವೆ. ಪರಭಾಷಿಗರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ ಇಲ್ಲೇ ಗಟ್ಟಿ ನೆಲೆ ಕಂಡುಕೊಂಡ ಇತ್ತೀಚಿನ ನಾಯಕಿ ನಟಿಯರ ಪೈಕಿ ಪೂಜಾ ಗಾಂಧಿ ಅವರ ನಂತರದ ಸ್ಥಾನ ರಾಗಿಣಿಯದಾಗುವುದು ಬಹುತೇಕ ಖಾತ್ರಿ ಎನಿಸಿದೆ. ಸದ್ಯಕ್ಕಂತೂ ರಾಗಿಣಿ ಶಿವನ ಧ್ಯಾನದಲ್ಲಿ ತೊಡಗಿದ್ದಾರೆನ್ನಬಹುದು.