ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಪುಟ್ಟಕ್ಕನ ಹೈವೇ' ಸೇರಿ ಕನ್ನಡಕ್ಕೆ 4 ರಾಷ್ಟ್ರೀಯ ಪ್ರಶಸ್ತಿ (Bettada jeeva | Hejjegalu | Swarna kamala prashasthi | Puttakkana Highway)
PR
ನವದೆಹಲಿ: 2010ನೇ ಸಾಲಿನ 58ನೇ ರಾಷ್ಟ್ರ ಪ್ರಶಸ್ತಿ ಕನ್ನಡದ 'ಬೆಟ್ಟದ ಜೀವ', 'ಹೆಜ್ಜೆಗಳು', 'ಪುಟ್ಟಕ್ಕನ ಹೈವೆ' ಚಿತ್ರಗಳಿಗೆ ಲಭಿಸಿದೆ. ಅತ್ತುತ್ಯಮ ವಿಮರ್ಶಕ ಪ್ರಶಸ್ತಿ ಪ್ರೊ. ಎನ್. ಮನು ಚಕ್ರವರ್ತಿ ಅವರಿಗೆ ಸಂದಿದೆ. ರಾಷ್ಟ್ರದ ಎಲ್ಲಾ ಭಾಷೆಗಳ ಚಲನ ಚಿತ್ರಗಳ ಗುಣಮಟ್ಟಗಳನ್ನು ಆಧರಿಸಿ ಕೊಡಮಾಡುವ ವಿವಿಧ ಸ್ವರೂಪದ ಪ್ರಶಸ್ತಿ ಇದಾಗಿದೆ.

ನೈಸರ್ಗಿಕ ವಿಕೋಪದ ನಡುವೆಯೂ ಪರಿಸರದ ಮೇಲೆ ವೃದ್ದ ದಂಪತಿಗೆ ಇರುವ ಕಾಳಜಿಯ ಬಗ್ಗೆ ಬೆಳಕು ಚೆಲ್ಲುವ ಶಿವರಾಮ್ ಕಾರಂತರ 'ಬೆಟ್ಟದ ಜೀವ' ಕಾದಂಬರಿ ಆಧಾರಿತ ಪಿ. ಶೇಷಾದ್ರಿ ಅವರ ನಿರ್ದೇಶನದ 'ಬೆಟ್ಟದ ಜೀವ' ಚಿತ್ರಕ್ಕೆ ಅತ್ಯುತ್ತಮ ಪರಿಸರ ಜಾಗೃತಿ ಪ್ರಶಸ್ತಿ ಲಭಿಸಿದೆ. ರಜತ ಕಮಲ ಸೇರಿದಂತೆ ಒಂದೂವರೆ ಲಕ್ಷ ನಗದನ್ನು ಪ್ರಶಸ್ತಿ ಒಳಗೊಂಡಿದೆ.

ಸರಕಾರಿ ಶಾಲೆಯಲ್ಲಿ ಓದುತ್ತಿರುವ ಪುಟ್ಟ ಬಾಲಕಿಯೊಬ್ಬಳು ಕಷ್ಟ, ಕಾರ್ಪಣ್ಯಗಳ ನಡುವೆಯೂ ಕೀಳರಿಮೆಯನ್ನು ಮೆಟ್ಟಿನಿಂತು ಯಶಸ್ಸು ಸಾಧಿಸುವ ಕಥಾಹಂದರವನ್ನು ಹೊಂದಿರುವ ರಾಮದಾಸ್ ನಾಯ್ಡು ಅವರ 'ಹೆಜ್ಜೆಗಳು' ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಲಭಿಸಿದೆ. ಸ್ವರ್ಣ ಕಮಲ ಮತ್ತು ಒಂದೂವರೆ ಲಕ್ಷ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಈ ಎರಡೂ ಚಿತ್ರಗಳನ್ನು ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ.

ಹೈವೇ ಹೆಸರಿನಲ್ಲಿ ಬಡ ಜನರ ಭೂಮಿ ಲೂಟಿಯಾಗುತ್ತಿರುವ ಕಥಾ ಹಂದರವನ್ನು ಹೊಂದಿರುವ 'ಪುಟ್ಟಕ್ಕನ ಹೈವೇ' ಚಿತ್ರಕ್ಕೆ ಬಿಡುಗಡೆಗೆ ಮುಂಚಿತವಾಗಿಯೇ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿದೆ. ರಜತ ಕಮಲ ಮತ್ತು ಒಂದು ಲಕ್ಷ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಶೃತಿ, ಪ್ರಕಾಶ್ ರೈ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ಬಿ. ಸುರೇಶ್ ನಿರ್ದೇಶಿಸಿದ್ದಾರೆ. ಪ್ರಕಾಶ್ ರೈ ಮತ್ತು ಶೈಲಜಾ ನಾಗ್ ಚಿತ್ರದ ನಿರ್ಮಾಪಕರು.

ಹಾಗೂ ಹಾಲಿವುಡ್ ಚಿತ್ರಗಳಲ್ಲಿ ಮೂಡಿಬರುವ ಕಲೆ, ಸಾಮಾಜಿಕ ಸತ್ವಗಳು, ವಿಶೇಷವಾಗಿ ಕನ್ನಡ ಸಿನಿಮಾದಲ್ಲಿ ಕಂಡು ಬರುವ ಸಾಮಾಜಿಕ ಸನ್ನಿವೇಶಗಳನ್ನು ಗಂಭೀರವಾದ ಚರ್ಚೆಗೆ ಒಳಪಡುವಂತೆ ವಿಮರ್ಶಿಸಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿರುವ ಪ್ರೊ. ಎನ್. ಮನು ಚಕ್ರವರ್ತಿ ಅವರಿಗೆ 'ಉತ್ತಮ ವಿಮರ್ಶಕ' ಪ್ರಶಸ್ತಿ ಸಂದಿದೆ. ಸ್ವರ್ಣ ಕಮಲ ಮತ್ತು ರೂ. 37,500ನ್ನು ಈ ಪ್ರಶಸ್ತಿ ಒಳಗೊಂಡಿದೆ. ಒಟ್ಟಾರೆಯಾಗಿ ಕನ್ನಡಕ್ಕೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಬಂದಿದೆ.

ಇನ್ನುಳಿದಂತೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಮಲಯಾಳಂ ನ 'ಆದಮಿಂಡೆ ಮಗನ್ ಅಬು', ಅತ್ಯುತ್ತಮ ಚೊಚ್ಚಲ ನಿರ್ದೇಶನಕ್ಕೆ ಕೊಡಮಾಡುವ ಇಂದಿರಾಗಾಂಧಿ ಪ್ರಶಸ್ತಿ ಮರಾಠಿ ಚಿತ್ರ 'ಬಾಬೂ ಬೇಂಡ್ ಬಾಜ' ಚಿತ್ರಕ್ಕೆ, ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ 'ದಬಾಂಗ್'ಗೆ ಲಭಿಸಿದೆ.

ರಾಷ್ಟ್ರೀಯ ಬಾವೈಕ್ಯತಾ ಪ್ರಧಾನ ಚಿತ್ರಕ್ಕೆ ಕೊಡಲಾಗುವ ನರ್ಗಿಸ್ ದತ್ತ್ ಪ್ರಶಸ್ಥಿ ಬಂಗಾಳಿಯ 'ಮೊನರ್ ಮನುಷ್' ಚಿತ್ರದ ಪಾಲಾಗಿದೆ.

ಅತ್ಯುತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿ ಮರಾಠಿಯ 'ಚಾಂಪಿಯನ್ಸ್', ಅತ್ಯುತ್ತಮ ನಿರ್ದೇಶನ ತಮಿಳಿನ 'ಆಡು ಕಲಮ್'.

ಅತ್ಯುತ್ತಮ ನಟ ತಮಿಳಿನ ಧನುಷ್ (ಆಡು ಕಲಮ್) ಮತ್ತು ಮಲಯಾಳಂ ನ ಸಲೀಂ ಕುಮಾರ್ (ಆದಮಿಂಡೆ ಮಗನ್ ಅಬು).

ಅತ್ಯುತ್ತಮ ನಟಿ ಮರಾಠಿ ನಟಿ ಮಿತಾಲಿ ಜಗ್‌ತಪ್ ವರದ್ಕರ್ (ಬಾಬೂ ಬೇಂಡ್ ಬಾಜಾ) ಮತ್ತು ತಮಿಳಿನ ಸರಣ್ಯಾ ಪೊನ್ವಣ್ಣನ್ (ತೆನ್ ಮೇರ್ಕು ಪರುವಕಾಟ್ರು).

ಅತ್ಯುತ್ತಮ ಸಹಾಯಕ ನಟ ತಮಿಳಿನ ಜೆ. ತಂಬಿ ರಾಮಯ್ಯ (ಮೈನಾ).

ಅತ್ಯುತ್ತಮ ಸಹಾಯಕ ನಟಿ ತಮಿಳಿನ ಸುಕುಮಾರಿ (ನಮ್ಮ ಗ್ರಾಮಂ).

ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಹಿಂದಿ ನಟಿ ಹರ್ಷ ಮಯಾರ್ (ಐ ಆಮ್ ಕಲಾಂ), ಮರಾಠಿ ನಟರಾದ ಶಾಂತನು ರಂಗನೇಕರ್ ಮತ್ತು ಮಚಿಂದ್ರ ಗಡ್ಕರ್ (ಚಾಂಪಿಯನ್ಸ್), ವಿವೇಕ್ ಚಬುಕ್‌ಸ್ವರ್ (ಬಾಬೂ ಬೇಂಡ್ ಬಾಜಾ).

ಅತ್ಯುತ್ತಮ ಹಿನ್ನಲೆ ಗಾಯಕ ಸುರೇಶ್ ವಡ್ಕರ್ (ಮರಾಠಿ ಚಿತ್ರ 'ಮೀ ಸಿಂದುಟೈ ಸಪ್ಕಲ್')

ಅತ್ಯುತ್ತಮ ಗಾಯಕಿ ರೇಖಾ ಭಾರದ್ವಾಜ್ (ಹಿಂದಿ ಚಿತ್ರ 'ಇಷ್ಕಿಯಾ')

ಅತ್ಯುತ್ತಮ ಸಂಕಲನ ಟಿ.ಇ. ಕಿಶೋರ್ (ತಮಿಳು ಚಿತ್ರ 'ಆಡು ಕಲಂ')

ಅತ್ಯುತ್ತಮ ನಿರ್ಮಾಣ ವಿನ್ಯಾಸ ಸಾಬು ಸಿರಿಲ್ (ತಮಿಳು ಚಿತ್ರ 'ಎಂದಿರನ್')

ಅತ್ಯುತ್ತಮ ವಸ್ತ್ರವಿನ್ಯಾಸ ಇಂದ್ರನ್ಸ್ ಜಯನ್ (ತಮಿಳು ಚಿತ್ರ 'ನಮ್ಮ ಗ್ರಾಮಂ')

ಅತ್ಯುತ್ತಮ ಮೇಕಪ್ ಕಲಾವಿದ ವಿಕ್ರಮ್ ಗಾಯಕ್‌ವಾಡ್ (ಬಂಗಾಳಿ ಚಿತ್ರ 'ಮೊನರ್ ಮನುಷ್')

ಅತ್ಯುತ್ತಮ ಸಂಗೀತ ನಿರ್ದೇಶಕರು ವಿಶಾಲ್ ಭಾರದ್ವಾಜ್ (ಇಷ್ಕಿಯಾ), ಇಸಾಕ್ ಥಾಮಸ್ ಕೊಟ್ಟಕಪಲ್ಲಿ (ಆದಮಿಂಡೆ ಮಗನ್ ಅಬು)

ಅತ್ಯುತ್ತಮ ಸಾಹಿತ್ಯ ವೈರಮುತ್ತು (ತೆನ್‌ಮೇರ್ಕು ಪರುವ ಕಾಟ್ರು)

ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ ವಿ. ಶ್ರೀನಿವಾಸ ಎಂ. ಮೋಹನ್ (ಎಂದಿರನ್)

ಅತ್ಯುತ್ತಮ ನೃತ್ಯ ನಿರ್ದೇಶನ ದಿನೇಶ್ ಕುಮಾರ್ (ಆಡು ಕಲಂ)

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು 'ಜೇತುಕಾ ಪತ್ತರ್ ದೇರೆ'(ಅಸ್ಸಾಮಿ), ಅಮಿ ಆಡು (ಬಂಗಾಳಿ), ದೊ ದೋನಿ ಚಾರ್ (ಹಿಂದಿ), ವೀಟ್ಟಿಲೇಕುಳ್ಳ ವಳಿ (ಮಲಯಾಳಂ), ಮಾಲಾ ಆಯಿ ವಯಚೆ (ಮರಾಠಿ), ತೆನ್ ಮೇರ್ಕು ಪರುವ ಕಾಟ್ರು (ತಮಿಳು), ಮೆಮೋರಿಸ್ ಇನ್ ಮಾರ್ಚ್ (ಇಂಗ್ಲೀಷ್) ಸೇರಿದಂತೆ ಚಲನ ಚಿತ್ರಕ್ಕೆ ಸಂಬಂಧಿಸಿ ಮೂವತ್ತಾರು ಪ್ರಶಸ್ತಿಗಳನ್ನು ವಾರ್ತಾ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದೆ. ಇದಲ್ಲದೆ ಅತ್ಯುತ್ತಮ ಕಿರು ಚಿತ್ರ, ಸಾಕ್ಷ್ಯ ಚಿತ್ರ ಹಾಗೂ ಸಿನಿಮಾ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು, ಬರಹಗಳಿಗೂ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.


ಇವನ್ನೂ ಓದಿ