ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ಇದೀಗ ಕನ್ನಡ ಚಿತ್ರದಲ್ಲೂ ಕಾಣಿಸಿಕೊಂಡ ಖುಷಿ ಅನುಭವಿಸುತ್ತಿರುವ ಬೆಡಗಿ ಓವಿಯಾ ಸದ್ಯ ಇಂಗ್ಲಿಷ್ ಸಾಹಿತ್ಯ ಓದುತ್ತಿರುವ ವಿದ್ಯಾರ್ಥಿನಿ. 'ಕಿರಾತಕ' ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಸಮಾರಂಭದಲ್ಲಿ ಗಾಢ ಕೆಂಪು ಉಡುಗೆ ತೊಟ್ಟು ಕಂಗೊಳಿಸಿದ ಓವಿಯಾ ಕೃಷ್ಣ ವರ್ಣದ ಬಾಲೆ. ಹುಟ್ಟಿದ್ದು ಕೇರಳ. ಆದರೆ ತಮಿಳು ಚಿತ್ರಗಳ ಮೇಲೆ ಒಲವು ಜಾಸ್ತಿ. ಮಾರ್ಜಾಲ ನಡಿಗೆಗೆ ಮನಸೋತು ಮಾಡೆಲಿಂಗ್ ಲೋಕ ಸುತ್ತಿದ ಓವಿಯಾ, ಅಲ್ಲಿಂದ ಸಿನಿಮಾ ಕ್ಷೇತ್ರಕ್ಕೆ ನೆಗೆದು ಬಂದವರು.
ತಮಿಳಿನ 'ಕಲಾಮಣಿ' ಚಿತ್ರದ ಯಶಸ್ಸು ಆಕೆಗೆ ಅವಕಾಶಗಳನ್ನು ತಂದುಕೊಡುತ್ತಿದೆ. ಅದೇ ಚಿತ್ರದ ಕನ್ನಡ ರೀಮೇಕ್ 'ಕಿರಾತಕ'ದಲ್ಲೂ ನಾಯಕಿಯಾಗಿ ನಟಿಸಿರುವ ಈ ಚೆಲುವೆ ಕಲೆಗೆ ಬೇಲಿ ಇಲ್ಲ ಎನ್ನುತ್ತಾರೆ.
'ಸನ್‌ಸಿಲ್ಕ್ ಬ್ಯೂಟಿ' ಅವಾರ್ಡ್ ಪಡೆದಿರುವ ಸಪೂರ ಮೈಮಾಟದ ಓವಿಯಾಳ ಮೂಲ ಹೆಸರು ಹೆಲನ್. ತಮಿಳಿನ 'ಕಲಾಮಣಿ' ಚಿತ್ರದ ನಿರ್ದೇಶಕರ ಆಣತಿ ಮೇರೆಗೆ ಓವಿಯಾ ಎನಿಸಿಕೊಂಡ ಈ ರೂಪಸಿಗೆ ಒಂದೇ ಪೋಲ್‌ವಾಲ್ಟ್‌ನಲ್ಲಿ ನಂಬರ್ ಒನ್ ನಟಿಯಾಗಬೇಕೆಂಬ ಹಂಬಲವೇನೂ ಇಲ್ಲ. ನಿಧಾನವಾಗಿ ಒಂದೊಂದೇ ಮೆಟ್ಟಿಲು ಏರಿ ಯಶ ಕಂಡರೆ ಸಾಕೆನ್ನುತ್ತಾರೆ ಓವಿಯಾ. ಕನ್ನಡದಲ್ಲೂ ಹೊಸ ವಿಭಿನ್ನ ಕಥೆಗಳಿಗಾಗಿ ಕಾಯುತ್ತಿರುವುದಾಗಿ ಹೇಳುವ ಓವಿಯಾ, ತನ್ನ ಈ ವರೆಗಿನ ಅನುಭವದಲ್ಲಿ ಕಂಡುಕೊಂಡ ಸತ್ಯವೆಂದರೆ ಯಾವುದೇ ಚಿತ್ರಕ್ಕೆ ಸ್ಕ್ತ್ರಿಪ್ಟ್ ಬೆನ್ನೆಲುಬು ಎಂಬುದು.