ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಚೊಚ್ಚಲ ನಿರ್ದೇಶನದ 'ಕೂಲ್' ಚಿತ್ರವನ್ನು ಬಿಡುಗಡೆ ಮಾಡಿದ ನಂತರ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಕಾರಣ ಅವರ 'ಕೂಲ್' ಚಿತ್ರಕ್ಕೆ ಪ್ರೇಕ್ಷಕ ಮತ್ತು ಅಭಿಮಾನಿಗಳಿಂದ ದೊರೆತಿರುವ ಬರೇ ಕೂಲ್ ಕೂಲ್ ಪ್ರತಿಕ್ರಿಯೆ!
ಯಾರು ಯಾವ ಕೆಲಸ ಮಾಡಬೇಕೋ ಅದನ್ನು ಬಿಟ್ಟು ಮತ್ತೊಂದನ್ನು ಮಾಡ ಹೋದರೆ ಎಂಥಾ ಪರಿಣಾಮ ಬೀರುತ್ತೇ ಅನ್ನೋದಕ್ಕೆ ಉದಾಹರಣೆ ಮಾಜಿ ಗೋಲ್ಡು ಹಾಲಿ ರೋಲ್ಡ್ ಸ್ಟಾರ್ ಗಣೇಶ್. ತಾನು ಯಾವುದರಲ್ಲಿ ಕೈ ಇಟ್ಟರೂ ಯಶಸ್ಸು ಗ್ಯಾರಂಟಿ ಎಂದುಕೊಂಡಿದ್ದ ಅವರ ಓವರ್ ಕಾನ್ಪಿಡೆನ್ಸ್ ಮೇಲಿಂದ ಮೇಲೆ ಕೈ ಕೊಡುತ್ತಲೇ ಇದೆ.
ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಮ್ಯಾಚ್ ಬಿಟ್ಟರೆ 'ಕೂಲ್' ಚಿತ್ರದ ಅಪಯಶಸ್ಸಿನ ಬಗ್ಗೆ ಇಡೀ ಗಾಂಧಿನಗರ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದುದಕ್ಕೆ ಕಾರಣ 'ಕೂಲ್' ಬಗ್ಗೆ ಆರಂಭದಲ್ಲೇ ಹುಟ್ಟಿದ್ದ ವಿವಾದ.
ಈ ಚಿತ್ರಕ್ಕೆ ಮುಸ್ಸಂಜೆ ಮಹೇಶ್ ನಿರ್ದೇಶಕರಾಗಿ ಆರಂಭದಲ್ಲಿ ಆಯ್ಕೆಯಾಗಿದ್ದರು. ಒಂದೆರಡು ದಿನಗಳ ಚಿತ್ರೀಕರಣದ ನಂತರ ಅದೇಕೋ ಮಹೇಶ್‌ಗೂ ಗಣೇಶ್‌ಗೂ ಭಿನ್ನಾಭಿಪ್ರಾಯ ಉಂಟಾಗಿ ನಿರ್ದೇಶಕ ಮಹೇಶ್ ಚಿತ್ರದಿಂದ ಹೊರ ಬಿದ್ದರು. ಆ ಸಂದರ್ಭದಲ್ಲಿ ನಿರ್ಮಾಪಕಿ ಶಿಲ್ಪಾ ಗಣೇಶ್ ನಿರ್ದೇಶಕ ಮಹೇಶ್ ಬಗ್ಗೆ ತುಚ್ಛ್ಛವಾಗಿ ಮಾತಾಡಿದುದರ ಬಗ್ಗೆ ಇಡೀ ನಿರ್ದೇಶಕರ ಸಂಘ ಒಗ್ಗಟ್ಟಿನಿಂದ ಗಣೇಶ್ ವಿರುದ್ಧ ತಿರುಗಿ ಬಿದ್ದಿತ್ತು. ಹಾಗಾಗಿ ಆಗ ವಿಧಿ ಇಲ್ಲದೆ ಸ್ವತಃ ಗಣೇಶ್ 'ಕೂಲ್' ಚಿತ್ರದ ನಿರ್ದೇಶನವನ್ನೂ ಮೈ ಮೇಲೆ ಎಳೆದುಕೊಳ್ಳುವುದು ಅನಿವಾರ್ಯವಾಯಿತು.
ಇದಕ್ಕಿಂತ ಮೊದಲು ಗಣೇಶ್ ಅನೇಕ ನಿರ್ಮಾಪಕರ ಜೊತೆಗಿನ ಸಂಬಂಧ ಕೆಡಿಸಿಕೊಂಡಿದ್ದು ಬೇರೆ ಸಂಗತಿ. ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸದೆ ಕೈಕೊಟ್ಟು ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಗಣೇಶ್ ಹವ್ಯಾಸ ಕೂಡಾ ಚೇಂಬರಿನಲ್ಲಿ ದೊಡ್ಡ ಚರ್ಚೆಗೆ ಗುರಿಯಾಗಿತ್ತು. ಹೀಗಾಗಿ ನಿಮಾಪಕರು ಕೂಡಾ ಗಣೇಶ್ ವಿರುದ್ಧ ಬಂಡಾಯ ಎದ್ದಿದ್ದರು. ಒಂದೆಡೆ ನಿರ್ದೆಶಕರ ಮತ್ತು ಇನ್ನೊದೆಡೆ ನಿರ್ಮಾಪಕರ ವಿರೋಧ ಕಟ್ಟಿಕೊಂಡಿದ್ದ ಗಣೇಶ್‌ಗೆ 'ಕೂಲ್' ಚಿತ್ರದ ಯಶಸ್ಸು ಮುಖ್ಯವಾಗಿತ್ತು. ಆದರೆ 'ಕೂಲ್' ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಓಪನಿಂಗ್ ಪಡೆದಿಲ್ಲ.
ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆಯಾದಾಗ ಅದು ಗೆಲ್ಲುತ್ತೋ ಸೋಲುತ್ತೋ ಎಂದು ಗಾಂಧಿನಗರದ ಜನ ಶುಕ್ರವಾರ ಬೆಳಗ್ಗಿನಿಂದಲೇ ಕಾಯುತ್ತಾರೆ. ಆದರೆ ಆ ಚಿತ್ರ ಮೇಲೇಳದಿದ್ದರೆ ಯಾರೂ ಸಂಭ್ರಮಿಸುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ 'ಕೂಲ್' ಚಿತ್ರದ ಸೋಲನ್ನು ಕಂಡು ನಿರ್ದೇಶಕರ ಸಂಘ ಸಂಭ್ರಮವನ್ನಾಚರಿಸಿದೆ ಎಂಬ ಸುದ್ದಿ ಗಾಂಧಿನಗರದಿಂದ ಬಂದಿದೆ.