ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವರ್ಣರಂಜಿತ ಸರ್ಕಾರಿ ಕಾರ್ಯಕ್ರಮದಲ್ಲಿ 2008-09ನೇ ಸಾಲಿನ ಚಲನಚಿತ್ರ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಚಲನಚಿತ್ರಗಳ ಪ್ರದರ್ಶನದ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ವಿನಾಯಿತಿಯನ್ನು ರದ್ದು ಮಾಡುವ ಬಗ್ಗೆ ಪರೀಶೀಲಿಸುವುದಾಗಿ ತಿಳಿಸಿದರು. 'ಅಂಬಾರಿ' ಚಿತ್ರದ ನಾಯಕ ಯೋಗೀಶ್ ಅವರಿಗೆ ಅತ್ಯುತ್ತಮ ನಟ ಹಾಗೂ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿನ ನಟನೆಗಾಗಿ ರಾಧಿಕಾ ಪಂಡಿತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಖ್ಯಮಂತ್ರಿ ಪ್ರದಾನ ಮಾಡಿದರು.
ಹಿರಿಯ ಕಲಾವಿದೆ ಬಿ. ಸರೋಜಾದೇವಿ ಅವರಿಗೆ ಡಾ. ರಾಜ್ ಕುಮಾರ್ ಪ್ರಶಸ್ತಿ, ನಿರ್ದೇಶಕ ಕೆ.ಎಸ್. ದಾಸ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಜೀವಿತಾವಧಿಯಲ್ಲಿ ಮಾಡಿದ ಸಾಧನೆಗಾಗಿ ನೀಡುವ ಡಾ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ಎ.ಆರ್. ರಾಜು ಮತ್ತು ಆರ್.ಎನ್.ಕೆ. ಪ್ರಸಾದ್ ಅವರಿಗೆ ಪ್ರದಾನ ಮಾಡಲಾಯಿತು. ಹಿರಿಯ ಕಲಾವಿದರಾದ ಜಯಂತಿ, ಭಾರತಿ, ಅಂಬರೀಷ್, ರವಿಚಂದ್ರನ್ ಸೇರಿದಂತೆ ಚಿತ್ರೋದ್ಯಮದ ವಿವಿಧ ವಿಭಾಗಗಳ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಟಿ ತಾರಾ ಅವರ ನೃತ್ಯ ರೂಪಕ, ಶ್ರೀನಗರ ಕಿಟ್ಟಿ 'ಆಪ್ತ' ರಾಜ ಧಿರಿಸು, ಮತ್ತು ರೂಪಿಕಾ ಅವರ ನಾಗವಲ್ಲಿ ನರ್ತನ, ಹಿರಿಯ ನಟ ಸುದರ್ಶನ್ ಅವರ 'ಅಪಾರ ಕೀರ್ತಿ ಮೆರೆವ.....'ಹಾಡು ಕಾರ್ಯಕ್ರಮದ ವಿಶೇಷ. ಎಲ್ಲಕ್ಕಿಂತ ಮಿಗಿಲಾಗಿ ಮುಖ್ಯಮಂತ್ರಿ ಯಡಿಯೂರಪ್ಪ-ರೆಬೆಲ್ ಸ್ಟಾರ್ ಅಂಬರೀಷ್ ಆಪ್ತ ಸಮಾಲೋಚನೆ, ಜಯಮಾಲಾ, ಭಾರತಿ, ಶ್ರುತಿ, ಸುಧಾರಾಣಿ ಅವರ ಸಮ್ಮಿಲನ ಪ್ರಮುಖ ಆಕರ್ಷಣೆಯಾಗಿತ್ತು.