ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ' ಆಗಾಗ ಭಾರೀ ಸುದ್ದಿಗೂ ಗ್ರಾಸವಾಗುತ್ತಿದೆ. ಇದು ನಿರ್ದೇಶಕ ಪ್ರೇಮ್ ಅವರ ಗಿಮಿಕ್ ಎನ್ನುವವರೂ ಇದ್ದಾರೆ. ಅದೇನೇ ಇರಲಿ, ಇದೀಗ 'ಜೋಗಯ್ಯ' ಮತ್ತೊಮ್ಮೆ ಭಾರೀ ಸುದ್ದಿ ಮಾಡಿದ್ದಾನೆ. ಅದೂ ಹಾಡುಗಳ ಮೂಲಕ. 'ಜೋಗಯ್ಯ' ಧ್ವನಿಸುರುಳಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೂರೇ ದಿನಕ್ಕೆ ಲಕ್ಷಕ್ಕೂ ಮೀರಿ ಆಡಿಯೋ ಮಾರಾಟವಾಗಿದೆಯಂತೆ. ಇದೊಂದು ಹೊಸ ದಾಖಲೆಯೇ ಸರಿ.
ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದಿರುವ ಅಶ್ವಿನಿ ಆಡಿಯೋದ ಕೃಷ್ಣಪ್ರಸಾದ್ ಪ್ರಕಾರ ಮೊದಲ ಹಂತದಲ್ಲಿ 45ಸಾವಿರ ಧ್ವನಿಸುರುಳಿಗಳನ್ನು ಪ್ರಿಂಟ್ ಮಾಡಲಾಗಿತ್ತು. ಆ ನಂತರ ಮತ್ತೆ 45ಸಾವಿರ. ಈಗ ಹೊಸತಾಗಿ 50ಸಾವಿರ ಆಡಿಯೋ ಸಿಡಿಗಳು ಅಚ್ಚಾಗಿವೆ. ಅಲ್ಲಿಗೆ ಒಂದು ಲಕ್ಷದ ನಲ್ವತ್ತು ಸಾವಿರ!
ಆರಂಭದಲ್ಲಿ ಬೆಂಗಳೂರು, ಮೈಸೂರು ಪ್ರಾಂತ್ಯಗಳಲ್ಲಿ 'ಜೋಗಯ್ಯ' ಹಾಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಜೊತೆಗೆ ಈಗ ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಾ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಿಂದ ಈಗ ರಿಪೀಟ್ ಆರ್ಡರ್ ಬರುತ್ತಿದೆ. ಹೀಗೆಯೇ ಮುಂದುವರಿದರೆ ಎರಡು ಲಕ್ಷ ದಾಟಬಹುದು ಎಂದು ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ ಕೃಷ್ಣಪ್ರಸಾದ್.