'ಪುಟ್ಟಕ್ಕನ ಹೈವೆ' ಖುಷಿಯಲ್ಲಿ ಮತ್ತೆ ನಿರ್ದೇಶನಕ್ಕೆ ರೈ ಸಜ್ಜು
PR
ಚಿತ್ರರಂಗ ಕಮರ್ಶಿಯಲ್ ಮಯವಾಗಿರುವ ಈ ದಿನಗಳಲ್ಲೂ ಬಿ. ಸುರೇಶ್ ಅವರಂತಹ ನಿರ್ದೇಶಕರು ವಿಭಿನ್ನ ಆಲೋಚನೆಯೊಂದಿಗೆ ಸಿನಿಮಾ ಮಾಡುತ್ತಾರೆ. ಈಗ ಅವರು ನಿರ್ದೇಶಿಸಿರುವ 'ಪುಟ್ಟಕ್ಕನ ಹೈವೇ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರುವ ಪ್ರಕಾಶ್ ರೈ ಅದೇ ಖುಷಿಯಲ್ಲಿ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.
ಶ್ರುತಿ, ಅಚ್ಚ್ಯುತ, ಶ್ರೀನಿವಾಸ ಪ್ರಭು, ವೀಣಾ ಸುಂದರ್, ವಿಜಯ ಸಾರಥಿ, ಸಿಹಿಕಹಿ ಚಂದ್ರು, ತಾರಾ ಬಳಗದಲ್ಲಿರುವ ಈ ಚಿತ್ರ ಕಳೆದ ಶುಕ್ರವಾರ ತೆರೆ ಕಂಡಿದ್ದು ಸತ್ಯ ಘಟನೆಯೊಂದನ್ನು ಆಧರಿಸಿ ಸುರೇಶ್ ಅವರು ಈ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದಾರಂತೆ.
'ಪುಟ್ಟಕ್ಕನ ಹೈವೇ'ಯನ್ನು ಸುರೇಶ್ ಅವರು ಮಾಧ್ಯಮ ಮಿತ್ರರಿಗೆ ತೋರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಟಿ ಶ್ರುತಿ 'ಸಿನಿಮಾವನ್ನು ಗೌರವಿಸುವ, ಆರಾಧಿಸುವ ತಂಡವೊಂದು ಈ ಚಿತ್ರವನ್ನು ತಯಾರಿಸಿದೆ ನನಗೆ ಇದಕ್ಕಿಂತ ಹೆಚ್ಚಿನ ಸಂತೋಷವಿಲ್ಲ' ಎಂದು ಹೇಳಿದರು.
ಕೆ. ಬಾಲಚಂದರ್ ಅವರ 'ತಣ್ಣೀರ್ ತಣ್ಣೀರ್' ಚಿತ್ರದಲ್ಲಿ ಯಾವ ರೀತಿಯ ನಿರೂಪಣಾ ಶೈಲಿಯನ್ನು ಅಳವಡಿಸಿಕೊಳ್ಳಲಾಗಿತ್ತೋ ಅದೇ ರೀತಿ ಜಾಣ್ಮೆಯಿಂದ ಸುರೇಶ್ ಅವರು ಸಿನಿಮಾ ಮಾಡಿದ್ದಾರೆ ಎಂದು ಶ್ರುತಿ ಮತ್ತು ಮಂಡ್ಯ ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
'ಅಭಿವೃದ್ದಿಯ ಹೆಸರಿನಲ್ಲಿ ನಾವು ನಮ್ಮ ಬದುಕಿನ ಅರ್ಥವನ್ನೇ ಕಳೆದುಕೊಳ್ಳುತ್ತಿದ್ದೇವೆ. ದಿನ ಕಳೆದಂತೆ ಮನುಷ್ಯರು ತೀರಾ ಯಾಂತ್ರಿಕರಾಗುತ್ತಿದ್ದಾರೆ. ಸಹಜ ಭಾವನೆ, ಸಂಬಂಧ, ಸ್ಪಂದನೆಗಳಿಗೆ ಆಸ್ಪದವೇ ಇಲ್ಲದ ಹಾಗಾಗಿದೆ. ಈ ವಾಸ್ತವತೆಯ ಚಿತ್ರಣ 'ಪುಟ್ಟಕ್ಕನ ಹೈವೇ' ಚಿತ್ರದಲ್ಲಿದೆ. ಇಂತಹ ಸಿನಿಮಾಗಳಿಂದ ನಮ್ಮಂತಹ ಕಲಾವಿದರ ಭಾವನೆಗಳು ಜಾಗೃತಗೊಳ್ಳುತ್ತವೆ' ಎಂದರು ಪ್ರಕಾಶ್ ರೈ.
'ಪುಟ್ಟಕ್ಕನ ಹೈವೇ' ಚಿತ್ರದಲ್ಲಿ ಗೊಂದಲ, ಗೋಜಲುಗಳ ನಿವಾರಕ ವಾಚ್‌ಮನ್ ಪಾತ್ರ ಮಾಡಿದ್ದೇನೆ. ಸಂಭ್ರಮ, ಸಡಗರಗಳಿಂದ ನಾವು ಈ ಚಿತ್ರಕ್ಕೆ ಕೆಲಸ ಮಾಡಿದ್ದೇವೆ. ಚಿತ್ರದ ಬಗ್ಗೆ ಆಶಯ, ತುಡಿತ, ಅರ್ಥಪೂರ್ಣ ನೀರೀಕ್ಷೆ ಎಲ್ಲವೂ ಇದೆ ಎಂದು ಪ್ರಕಾಶ್ ರೈ ಹೇಳಿದರು. ಈ ತುಡಿತಗಳಿಗೆಲ್ಲ ಪ್ರೇಕ್ಷಕ ಮಹಾಪ್ರಭುವೇ ಉತ್ತರ ನೀಡಬೇಕು.
'ಪುಟ್ಟಕ್ಕನ ಹೈವೇ' ಚಿತ್ರದ ಸ್ಕ್ತ್ರೀನ್ ಪ್ಲೇಯನ್ನು ಸುರೇಶ್ ಅವರು ತುಂಬಾ ಬುದ್ದಿವಂತಿಕೆಯಿಂದ ಮಾಡಿದ್ದಾರೆ. ಪ್ರಾಮಾಣಿಕ ಪರಿಶ್ರಮ ವಹಿಸಿ ಕೆಲಸ ಮಾಡಿದ್ದೇವೆ. 'ನಾನು ನನ್ನ ಕನಸು' ಚಿತ್ರ ನನಗೆ ಎಷ್ಟು ತೃಪ್ತಿ ಕೊಟ್ಟಿತ್ತು ಅಂದರೆ ಅಮೆರಿಕಕ್ಕೆ ಹೋದಾಗಲೂ ಅದರ ಬಗ್ಗೆ ಹೇಳಿಕೊಂಡಿದ್ದೆ. ಈಗ ಪುನಃ 'ಪುಟ್ಟಕ್ಕನ ಹೈವೇ' ಚಿತ್ರದಲ್ಲೂ ಅದೇ ಅನುಭವ ಆಗಿದೆ ಎಂದರು ರೈ.
ಮತ್ತೆ ನಿರ್ದೇಶನದತ್ತ ಪ್ರಕಾಶ್ ರೈ ಕನ್ನಡದಲ್ಲಿ ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿ ಯಶಸ್ವಿಯಾದ ಬಹುಭಾಷಾ ನಟ, ರಾಷ್ಟ್ತ್ರಪ್ರಶಸ್ತಿ ವಿಜೇತ ಪ್ರಕಾಶ್ ರೈ ಕನ್ನಡದಲ್ಲಿ ಮತ್ತೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ. 'ನಾನು ನನ್ನ ಕನಸು' ಚಿತ್ರ ನಿರ್ದೇಶಿಸಿ ನನಗೂ ನಿರ್ದೇಶನ ಮಾಡಲು ಬರುತ್ತದೆ ಎಂದು ತೋರಿಸಿದ ನಟ-ನಿರ್ಮಾಪಕ ಪ್ರಕಾಶ್ ರೈ ಎರಡನೇ ಬಾರಿಗೆ ಕನ್ನಡ ಚಿತ್ರ ನಿರ್ದೇಶಿಸುವುದು ಬಹುತೇಕ ಖಚಿತವಾಗಿದೆ.
'ಕನ್ನಡದಲ್ಲಿ ಸದ್ಯಕ್ಕೆ ಎರಡು ಪ್ರಾಜೆಕ್ಟ್ ಮಾಡಬೇಕೆಂದಿದ್ದೇನೆ. ಅದರಲ್ಲಿ ಚಿತ್ರವೊಂದನ್ನು ನಿರ್ದೇಶಿಸುವುದು ಖಚಿತ. ಯಾವ ಚಿತ್ರ ಏನು ಎನ್ನುವುದನ್ನು ಸದ್ಯದಲ್ಲಿಯೇ ವಿವರವಾಗಿ ತಿಳಿಸುತ್ತೇನೆ' ಎಂದು ಹಾಗೆಯೇ ರಹಸ್ಯ ಕಾಪಾಡಿಕೊಂಡರು ಪ್ರಕಾಶ್ ರೈ.
'ಕನ್ನಡದಲ್ಲಿ ಚಿತ್ರ ನಿರ್ದೇಶಿಸುವ ಮುನ್ನ ತೆಲುಗು, ತಮಿಳಿನ ಚಿತ್ರಗಳ ಜವಾಬ್ದಾರಿಗಳನ್ನು ಪೂರೈಸುತ್ತೇನೆ ಅಲ್ಲದೆ ಬಾಲಿವುಡ್‌ನ ಖ್ಯಾತ ನಟ ಅಮಿತಾ ಬಚ್ಚನ್ ಜೊತೆಗಿನ ಚಿತ್ರವನ್ನೂ ಪೂರ್ಣಗೊಳಿಸಿ ಆ ನಂತರ ಕನ್ನಡ ಚಿತ್ರವನ್ನು ಕೈಗೆತ್ತಿಕೊಳ್ಳುತ್ತೇನೆ' ಎನ್ನುತ್ತಾರೆ ಪ್ರಕಾಶ್ ರೈ.