ಕನ್ನಡ ಚಲನಚಿತ್ರ ಸಾಹಿತ್ಯ ರಂಗದ ಸೋರಟ್ ಅಶ್ವತ್ಥ್ ಅವರ ಪುತ್ರಿ ಗಾಯಕಿ ಕುಮಾರಿ ಜ್ಯೋತಿ ಶಾಸ್ತ್ರಿ (58) ಶುಕ್ರವಾರ ಮೈಸೂರಿನಲ್ಲಿ ನಿಧನರಾದರು.
ಜ್ಯೋತಿ ಶಾಸ್ತ್ರಿ ಅವರು ಕಳೆದ ಸುಮಾರು ಐವತ್ತು ವರ್ಷಗಳಿಂದಲೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಅಪಾರ ಹೆಸರು ಗಳಿಸಿದವರು.
'ಮೈಸೂರು ಮ್ಯೂಸಿಕ್ ಪಾರ್ಟಿ' ಮೂಲಕ ತಮ್ಮ ಗಾಯನ ಆರಂಭಿಸಿ ಆ ನಂತರ ಡಾ. ರಾಜ್ ಕುಮಾರ್ ಅವರ ಸಂಗೀತ ಸಂಜೆಗಳಲ್ಲಿ ಸಹ ಗಾಯಕಿಯಾಗಿ ಹೆಸರು ಗಳಿಸಿದವರು.
ಆಕಾಶವಾಣಿಯ 'ಎ' ಗ್ರೇಡ್ ಕಲಾವಿದರಾಗಿ, ದೂರದರ್ಶನ ಮತ್ತಿತರ ಟಿವಿ ವಾಹಿನಿಗಳಲ್ಲಿ ತಮ್ಮ ಗಾಯನ ಕಲೆಯ ಪ್ರತಿಭಾ ಪ್ರದರ್ಶನ ನೀಡಿದ್ದರು. ಕನ್ನಡ ಚಲನಚಿತ್ರಗಳಾದ 'ಶನಿ ಪ್ರಭಾವ', 'ಭಾಗ್ಯವಂತ', 'ಜೈ ಕರ್ನಾಟಕ' ಮುಂತಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಜ್ಯೋತಿ ಶಾಸ್ತ್ರಿ ಅಕಾಲ ನಿಧನಕ್ಕೆ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.