ರೋಮಿಯೋ-ಜೂಲಿಯೆಟ್, ಸಲೀಂ-ಅನಾರ್ಕಲಿ ಮುಂತಾದ ಜೋಡಿ ಹೆಸರುಗಳು ಉತ್ಕಟ ಪ್ರೇಮದ ಸಂಕೇತ. ಇಂತಹ ಅಮರ ಪ್ರೇಮಿಗಳ ವೃತ್ತಾಂತ ಹೊಂದಿ ವಿಶ್ವಾದ್ಯಂತ ಹಲವಾರು ಸಿನಿಮಾಗಳು ಬಂದಿವೆ. ಯಾವತ್ತೂ ಡಿಫರೆಂಟ್ ಆಗಿ ಯೋಚನೆ ಮಾಡುವ ಸಾಧು ಕೋಕಿಲಾ ಅವರು ಅಪ್ಪ ನೆಟ್ಟ ಆಲದ ಮರ ಎಂದು ಜೋತು ಬೀಳುತ್ತಾರೆಯೇ?
ರಾಕೇಶ್ ಕುಮಾರ್ ಜೈನ್ ಎಂಬ ನಿರ್ಮಾಪಕರಿಗಾಗಿ ಸಾಧು ಕೋಕಿಲಾ ಅವರು 'ಅನಾರ್ಕಲಿ' ಎಂಬ ಹೆಸರಿನ ಚಿತ್ರ ನಿರ್ದೆಶಿಸಲು ಮುಂದಾಗಿದ್ದಾರೆ. ಈ ಅನಾರ್ಕಲಿ ಸಲೀಮನ ಪ್ರೇಯಸಿಯಲ್ಲ. ಅವಳ ಕಥೆಗೂ ಸಾಧು ಕೋಕಿಲಾ ಅವರ ಅನಾರ್ಕಲಿಯ ಕಥೆಗೂ ಹೋಲಿಕೆಯಿಲ್ಲ. ಇವಳು ತುಂಬಾ ಡಿಫರೆಂಟ್ ಅನಾರ್ಕಲಿ. ಇದರಲ್ಲಿ ಸಲೀಮ ಇದ್ದಾನೆ. ಆದರೆ ಟೈಟಲ್‌ನಲ್ಲಿ ಅವನ ಹೆಸರೇ ಬರುವುದಿಲ್ಲವಂತೆ.
ಸಲೀಮನಾಗಿ ದಿಗಂತ್, ಅನಾರ್ಕಲಿಯಾಗಿ ಪ್ರಜ್ಞಾ ಮತ್ತು ಇನ್ನೊಂದು ಮುಖ್ಯ ಪಾತ್ರದಲ್ಲಿ ರಮ್ಯಾ ಬಾರ್ನಾ ಅಭಿನಯಿಸುತ್ತಾರೆ. ಚಿತ್ರದಲ್ಲಿ ಇಬ್ಬರು ಅನಾರ್ಕಲಿಯರೆಂದರೂ ನಡೆಯುತ್ತದಂತೆ !
ಬೆಂಗಳೂರಿನ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಈ ಚಿತ್ರದ ಶೂಟಿಂಗ್ ಆರಂಭಗೊಡಿದೆ. ಇದಕ್ಕಾಗಿ ಸಾಧು ಕೋಕಿಲಾ ಡಿಫರೆಂಟಾಗಿ ವ್ಯವಸ್ಥೆ ಮಾಡಿದ್ದರು. ಸಲೀಂ-ಅನಾರ್ಕಲಿ ಪ್ರೇಮ ಪ್ರಕರಣದ ಕೆಲವು ಚಿತ್ರಗಳ ತುಣುಕುಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಇಂತಹ ವಿಭಿನ್ನತೆಗಳಿಗೆ ಯಾವತ್ತೂ ಹೆಸರಾಗಿರುವ ನಟ-ನಿರ್ದೇಶಕ ಉಪೇಂದ್ರ ಅವರು 'ಅನಾರ್ಕಲಿ' ಚಿತ್ರದ ಮೊದಲ ದೃಶ್ಯಕ್ಕೆ ಕ್ಯಾಮರಾ ಚಾಲನೆ ಮಾಡಿ ಹಸಿರು ನಿಶಾನೆ ತೋರಿಸಿದರು.