'ಡಬ್ಬಿಂಗ್ ಎನ್ನುವುದು ಸತ್ಯ ಮತ್ತು ಕಲೆಯ ಭ್ರಷ್ಟಾಚಾರ. ಡಬ್ಬಿಂಗ್ ಕೇವಲ ನಮ್ಮ ತಂತ್ರಜ್ಞರ ಕೆಲಸವನ್ನಷ್ಟೇ ಕಿತ್ತುಕೊಳ್ಳುವುದಿಲ್ಲ. ಬದಲಾಗಿ ನಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುವ ಅವಕಾಶವನ್ನೇ ಕೊಲ್ಲುತ್ತದೆ' ಎಂದು ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಕಟುವಾಗಿ ಟೀಕಿಸಿದ್ದಾರೆ.
ರಾಜ್ಯ ಮತ್ತು ರಾಷ್ಟ್ತ್ರ ಪ್ರಶಸ್ತಿ ವಿಜೇತ ಚಿತ್ರ ತಂಡದವರನ್ನು ಬೆಂಗಳೂರಿನಲ್ಲಿ ಅಭಿನಂದಿಸಿ ಮಾತನಾಡಿದ ಅವರು ಪದೇ ಪದೇ ಭಾರೀ ವಿವಾದಕ್ಕೆ ಕಾರಣವಾಗುತ್ತಿರುವ ಡಬ್ಬಿಂಗ್ ಸಂಸ್ಕೃತಿಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
'ಬೇರೆ ಕೆಲಸ ಮಾಡಿ ಚಿತ್ರ ನಿರ್ಮಾಪಕರಾಗುವ ಬಂಡವಾಳಶಾಹಿಗಳು ರೀಮೇಕ್ ಅಥವಾ ಡಬ್ಬಿಂಗ್‌ಗೆ ಹುಕುಂ ಕೊಡುತ್ತಿದ್ದಾರೆ. ಇದಕ್ಕೆ ಹಾಕಿದ ಬಂಡವಾಳ ವಾಪಸ್ ಬರುತ್ತಿಲ್ಲ ಅಥವಾ ಲಾಭ ಬರುತ್ತಿಲ್ಲ ಎಂಬ ಕಾರಣಗಳನ್ನು ಅವರು ನೀಡುತ್ತಿದ್ದಾರೆ. ಹೀಗೆ ಮಾತನಾಡುವವರು ಚಿತ್ರ ನಿರ್ಮಾಣಕ್ಕೆ ಬರಬಾರದು' ಎಂದರು ಭೈರಪ್ಪ.
'ಹಾಕಿದ ಬಂಡವಾಳ ವಾಪಸ್ ಬರಬೇಕು ಎನ್ನುವವರು ಜವಳಿ ಉದ್ಯಮಕ್ಕೋ, ಸಿಮೆಂಟ್, ಇಟ್ಟಿಗೆ ಉದ್ಯಮಕ್ಕೋ ಹೋಗಲಿ. ನಿರ್ಮಾಪಕರು ಎಂಬ ಬಂಡವಾಳಶಾಹಿಗಳು ಸಿನಿಮಾದಿಂದ ದೂರವಿರಲಿ' ಎಂದರು.
'ಡಬ್ಬಿಂಗ್, ರೀಮೇಕ್‌ಗಿಂತ ದೊಡ್ಡ ಭೌತಿಕ ದಾರಿದ್ರ್ಯ ಬೇರೊಂದಿಲ್ಲ. ರೀಮೇಕ್ ಅಥವಾ ಡಬ್ಬಿಂಗ್ ಮಾಡುವುದೆಂದರೆ ಒಂದು ಸಂಸ್ಕೃತಿಯನ್ನೇ ಕೊಂದಂತೆ' ಎಂದು ಪ್ರತಿಪಾದಿಸಿದ ಭೈರಪ್ಪ ಇದರ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು ಎಂದು ಕರೆ ಕೊಟ್ಟರು.
'ಚಿತ್ರ ಸಮೂಹ' ಏರ್ಪಡಿಸಿದ್ದ ಸಮಾರಂಭದಲ್ಲಿ ರಾಷ್ಟ್ತ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕ ಗೀರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಬಿ. ಸುರೇಶ್ ಮುಂತಾದವರು ಉಪಸ್ಥಿತರಿದ್ದರು.