ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೂಜಾಗಾಂಧಿಗೆ ಜೀವ ಬೆದರಿಕೆ (Pooja Gandhi | Dr. Kiran | Police | Nee Illade)
PR
ಚಲನಚಿತ್ರ ವಿತರಕ ಡಾ. ಕಿರಣ್ ಅವರಿಂದ ಜೀವ ಬೆದರಿಕೆ ಇದೆ ಎಂದು ಮುಂಗಾರು ಮಳೆ ನಟಿ ಪೂಜಾಗಾಂಧಿ ದೂರು ದಾಖಲಿಸಿದ್ದಾರೆ. ತನ್ನ ವಿರುದ್ಧ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಲೇ ಬರುತ್ತಿದ್ದಾರೆ ಎಂದು ಆರೋಪಿಸಿರುವ ನಟಿ ಪೂಜಾ, ಬುಧವಾರ ಬೆಳಿಗ್ಗೆ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಪ್ರತಿಯಾಗಿ ವಿತರಕ ಡಾ. ಕಿರಣ್ ಕೂಡ ಪೂಜಾಗಾಂಧಿ ಕಡೆಯಿಂದ ಜೀವ ಬೆದರಿಕೆಯಿದೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿದ್ದಾರೆ.

ಪೂಜಾ ಗಾಂಧಿ ಉಪಯೋಗಿಸುತ್ತಿರುವ ಕೆಂಪುಬಣ್ಣದ ಇನ್ನೋವಾ ಕಾರು ನನ್ನದು ಎಂದು ಆರೋಪಿಸಿರುವ ಡಾ. ಕಿರಣ್, ಆಕೆ ಉಪಯೋಗಿಸುತ್ತಿರುವ ಮೊಬೈಲ್ ಕೂಡ ನನ್ನದಾಗಿದೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು. ಹಾಗೂ ಆಕೆ ಸಂಕಷ್ಟದಲ್ಲಿದ್ದಾಗ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದೆ ಎಂದು ಹೇಳಿಕೊಂಡಿರುವ ಕಿರಣ್, ಪೂಜಾ ಇತ್ತೀಚೆಗೆ ತನ್ನ ಕಾರನ್ನು ಅಪಘಾತ ಮಾಡಿಕೊಂಡಿದ್ದರು. ಈ ವಿರುದ್ಧ ಬೆಂಗಳೂರಿನ ಚಾಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಕೆ ಉಪಯೋಗಿಸುತ್ತಿರುವ ಕಾರು ನನ್ನ ಹೆಸರಿನಲ್ಲಿರುವುದರಿಂದ ಪೊಲೀಸರು ನನ್ನ ವಿಚಾರಣೆಗೆ ಬಂದಿದ್ದರು. ಈ ಸಂಬಂಧ ಆಕೆಯಲ್ಲಿ ವಿವರ ಕೇಳಿದಾಗ ಉಡಾಫೆ ಮಾತುಗಳನ್ನು ಆಡಿದ್ದರು. ಆದ್ದರಿಂದ ನನ್ನ ಕಾರನ್ನು ಹಿಂತಿರುಗಿಸುವಂತೆ ಹಾಗೂ ತಾನು ಕೊಟ್ಟಿದ್ದ ಹಣವನ್ನು ಹಿಂತಿರುಗಿಸುವಂತೆ ಹೇಳಿದ್ದೆ ಎಂದು ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಡಾ. ಕಿರಣ್ ಅವರ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಪೂಜಾ, ಇನ್ನೋವಾ ಕಾರು ತನ್ನ ತಂದೆಯ ಟ್ರಾವಲ್ ವ್ಯವಹಾರಕ್ಕೆ ಸಂಬಂಧಿಸಿದ್ದು, ಹಾಗೂ ಕಿರಣ್ ಅವರ ಆರೋಪ ಆಧಾರ ರಹಿತವಾದದ್ದು ಎಂದಿದ್ದಾರೆ.

ವಿತರಕ ಡಾ. ಕಿರಣ್ ಅವರು ಪೂಜಾಗಾಂಧಿಯ ಚಿತ್ರಗಳನ್ನು ವಿದೇಶಗಳು ಸೇರಿದಂತೆ ಎಲ್ಲೆಡೆ ವಿತರಿಸುತ್ತಿದ್ದರು, ಅಲ್ಲದೆ ಪೂಜಾ ನಟಿಸಿದ 'ನೀ ಇಲ್ಲದೆ' ಚಿತ್ರಕ್ಕೆ ಮೊದಲು ನಿರ್ಮಾಪಕರಾಗಿದ್ದರು. ನಂತರ ಕಾರಣಾಂತರಗಳಿಂದ ಈ ಚಿತ್ರದ ನಿರ್ಮಾಪಕ ಜವಾಬ್ದಾರಿಯನ್ನು ನಿರ್ದೇಶಕ ಶಿವಗಣಪತಿ ವಹಿಸಿಕೊಂಡರು.

ಆ ನಂತರ ತಲೆದೋರಿದ್ದ ವಿವಾದದಲ್ಲಿ, 'ನೀ ಇಲ್ಲದೆ' ನಿರ್ಮಾಪಕ ಶಿವಗಣಪತಿ ಆರಂಭದಲ್ಲಿ ಒಪ್ಪಿಕೊಂಡಂತೆ ಸರಿಯಾಗಿ ಸಂಭಾವನೆ ನೀಡುತ್ತಿಲ್ಲ. ಕಾರಣವಿಲ್ಲದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಪೂಜಾಗಾಂಧಿ ಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೆ ಅಂಬರೀಷ್ ಮಧ್ಯಸ್ಥಿಕೆಯಲ್ಲಿ 'ನೀ ಇಲ್ಲದೆ' ವಿವಾದ ಕೊನೆಗೊಂಡಿತಾದರೂ, ಅದರ ಮುಂದುವರಿದ ಭಾಗವೆಂಬಂತೆ ಈ ವಿವಾದ ಉಲ್ಬಣಗೊಂಡಿದೆ.

ಡಾ. ಕಿರಣ್ ಮುಂಗಾರು ಮಳೆ ನಿರ್ಮಾಪಕ ಇ. ಕೃಷ್ಣಪ್ಪ ಅವರ ಬಾವ. ನಟಿ ಪೂಜಾಗಾಂಧಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಆರಂಭದಲ್ಲಿ ಇವರ ಸಂಬಂಧ ಚೆನ್ನಾಗಿಯೇ ಇತ್ತು.
ಇವನ್ನೂ ಓದಿ