'ಕಿರಾತಕ' ಚಿತ್ರದ ನಾಯಕಿ ಓವಿಯಾ ಫುಲ್ ಖುಷಿಯಲ್ಲಿದ್ದಾರೆ. ತಮಿಳಿನ 'ಕಳವಾಣಿ' ಚಿತ್ರ ಕನ್ನಡದಲ್ಲಿ 'ಕಿರಾತಕ' ಆಗಿದೆ. ಇದೇ ಚಿತ್ರ ತೆಲುಗಿನಲ್ಲೂ ರೀಮೇಕ್ ಆಗುತ್ತಿದೆ. ಮೂರೂ ಭಾಷೆಯ ಚಿತ್ರಗಳಿಗೆ ಓವಿಯಾರೇ ನಾಯಕಿ.
'ಒಂದೇ ಚಿತ್ರದಲ್ಲಿ ನಟಿಸಿದರೂ ಮೂರು ಭಾಷೆಗಳಲ್ಲಿ ಅಭಿನಯಿಸುವ ಅವಕಾಶ ಯಾರಿಗೆ ಸಿಗುತ್ತದೆ ಹೇಳಿ ನೋಡೋಣ? ನನಗೆ ಸಿಕ್ಕಿರುವ ಅದೃಷ್ಟ ಯಾರಿಗೂ ಸಿಗುವುದಿಲ್ಲ' ಎಂದು ನಗೆ ಬೀರುತ್ತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಓವಿಯಾ.
ಓವಿಯಾ ಮೂಲತಃ ಮಲಯಾಳಂನವರು. ಫ್ಯಾಶನ್ ಶೋ ಮತ್ತು ಮಾಡೆಲಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಓವಿಯಾ ತಮಿಳು ಭಾಷೆಯ 'ಕಳವಾಣಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ನಂತರ ಕನ್ನಡ, ತೆಲುಗಿನಲ್ಲೂ ನಟಿಸುವ ಅವಕಾಶ ಸಿಕ್ಕಿದೆ. ತಮಿಳಿನಲ್ಲಿ ಹೊಸ ಹುಡುಗ ನಕುಲ್ ಜೊತೆ ನಟಿಸುತ್ತಿದ್ದಾರೆ.
ಕನ್ನಡದ 'ಕಿರಾತಕ' ಚಿತ್ರದಲ್ಲಿ ಓವಿಯಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. 'ನಿಜ ಜೀವನದಲ್ಲಿ ಹಳ್ಳಿ ಜೀವನ ಅನುಭವಿಸಿದ್ದೀರಾ' ಎಂದು ಅವರನ್ನು ಕೇಳಿದರೆ 'ನಾನು ಟಿಪಿಕಲ್ ಹಳ್ಳಿ ಹುಡುಗೀನೂ ಅಲ್ಲ. ಮಾಡರ್ನ್ ಹುಡುಗೀನೂ ಅಲ್ಲ. ಎರಡಕ್ಕೂ ಮಧ್ಯೆ ಇದ್ದೇನೆ' ಎನ್ನುತ್ತಾರೆ.
ಓವಿಯಾ ಈಗ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳನ್ನು ಕಲಿಯುತ್ತಿದ್ದಾರೆ. ಎರಡು, ಮೂರು ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ಕನ್ನಡದಲ್ಲೇ ಮಾತನಾಡುವ ಭರವಸೆ ಇತ್ತರು.
'ಕಿರಾತಕ' ಚಿತ್ರ ಸದ್ಯಕ್ಕೆ ಬಿಡುಗಡೆಯಾಗುತ್ತಿಲ್ಲ. ಯಶ್ ಅಭಿನಯದ 'ರಾಜಧಾನಿ' ಚಿತ್ರ ಮೊದಲು ಬಿಡುಗಡೆಯಾಗುತ್ತಿದೆ. ಹಾಗಾಗಿ 'ಕಿರಾತಕ' ಮೂರು ವಾರಗಳ ಮಟ್ಟಿಗೆ ಮುಂದಕ್ಕೆ ಹೋಗಲಿದ್ದಾನೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಒಬ್ಬನೇ ಹೀರೋ ನಟಿಸಿದ ಚಿತ್ರವನ್ನು ಒಂದೇ ದಿನ ಬಿಡುಗಡೆ ಮಾಡುವುದರಿಂದ ಬಿಸಿನೆಸ್‌ಗೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.