ಪ್ರೇಮ್ ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ. ಒಂದು ಲಕ್ಷ ರೂಪಾಯಿ ಖರ್ಚು ಮಾಡಿದರೆ ಹತ್ತು ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದೆಲ್ಲ ಸುಳ್ಳು ಹೇಳುತ್ತಾರೆ ಎಂಬ ಆರೋಪ ಇದೆ. ಅದು ಎಷ್ಟು ಸುಳ್ಳೋ ನಿಜವೋ ಗೊತ್ತಿಲ್ಲ. ಆದರೆ ಈ ಬಾರಿ ಪ್ರೇಮ್ ನಿಜ ನುಡಿಯುತ್ತಿದ್ದಾರೆ ಎಂದು ಗಾಂಧಿನಗರದ ಜನರೇ ಹೇಳುತ್ತಿದ್ದಾರೆ.
ಅಂಥ ಮಹಾನ್ ಸತ್ಯ ಏನಪ್ಪಾ ಅಂದ್ರೆ 'ಜೋಗಯ್ಯ' ಚಿತ್ರದ ಆಡಿಯೋ ಸಿ.ಡಿ ರಿಲೀಸ್ ಆದ ಐದು ದಿನಗಳಲ್ಲಿ ಒಂದು ಲಕ್ಷ ಪ್ರತಿಗಳು ಮಾರಾಟವಾಗಿವೆಯಂತೆ. ಇದಕ್ಕೆ ಸಮರ್ಥನೆಯಾಗಿ ಅಶ್ವಿನಿ ಆಡಿಯೋ ಸಂಸ್ಥೆಯ ಮಾಲೀಕ ಕೃಷ್ಣಕುಮಾರ್ 'ಹೌದು ಮೊದಲ ದಿನವೇ ನಮಗೆ ಸಿಕ್ಕಾಪಟ್ಟೆ ಆರ್ಡರ್ ಇತ್ತು. ಆನಂತರ ಪ್ರತಿದಿನವೂ ರಿಪೀಟ್ ಆರ್ಡರ್ ಬರುತ್ತಲೇ ಇದೆ' ಎಂದರು.
'ನಮ್ಮ ಸಿ.ಡಿಯನ್ನು ಕಾಪಿ ಮಾಡೋದಕ್ಕೆ ಸಾಧ್ಯವೇ ಇಲ್ಲ. ಅಂಥ ಟೆಕ್ನಾಲಜಿ ಬಳಸಿ ರೆಕಾರ್ಡ್ ಮಾಡಿದ್ದೇವೆ' ಎಂದು ಆತ್ಮವಿಶ್ವಾಸದಿಂದ ಮಾತನಾಡಿದರು ಪ್ರೇಮ್. ಈಗ ಪ್ರತಿ ನಿತ್ಯ 'ಜೋಗಯ್ಯ'ದ ಒಂದು ಸಾವಿರ ಸಿ.ಡಿಗಳು ಮಾರಾಟ ಆಗುತ್ತಿವೆಯಂತೆ.
'ಇಂಟರ್‌ನೆಟ್‌ನಲ್ಲಿ ನಮ್ಮ ಚಿತ್ರದ ಹಾಡುಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಆಗುವುದಿಲ್ಲ. ಇಂಥ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದರಿಂದಲೇ ನಾವು ಅಧಿಕ ಮಟ್ಟದಲ್ಲಿ ಸಿ.ಡಿ ಮಾರಾಟ ಮಾಡುವುದು ಸಾಧ್ಯವಾಯಿತು' ಎಂದು ಪ್ರೇಮ್ ಖುಷಿಯ ನಗೆ ಬೀರಿದರು. 'ಜೋಗಯ್ಯ' ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆಯಂತೆ.