ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಮತ್ತೊಮ್ಮೆ ಚಿತ್ರ ನಿರ್ಮಾಣ ಮಾಡುವ ಸಾಹಸಕ್ಕೆ ಇಳಿಯಲಿದ್ದಾರೆ. 'ಹಸೀನಾ' ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ತಾರಾ ಆ ಚಿತ್ರದ ನಿರ್ಮಾಣವನ್ನೂ ಮಾಡಿದ್ದರು. ಇದೀಗ ಎರಡನೆ ಬಾರಿಗೆ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.
ಜುಲೈನಲ್ಲಿ ಹೊಸ ಚಿತ್ರದ ಮುಹೂರ್ತ ಸಮಾರಂಭ ಜರುಗಲಿದೆಯಂತೆ. ಚಿತ್ರದ ಬಗ್ಗೆ ಎಲ್ಲಾ ವಿವರಗಳನ್ನು ಸದ್ಯದಲ್ಲೇ ನೀಡುವುದಾಗಿ ತಾರಾ ಹೇಳಿದ್ದಾರೆ.
ಹೊಸ ನಿರ್ದೇಶಕರೊಬ್ಬರು ತಾರಾ ನಿರ್ಮಾಣದ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕಥೆ ಕೂಡ ಅವರದೇ ಆಗಿದೆ. ಚಿತ್ರದಲ್ಲಿ ಯಾರ್ಯಾರು ಕಲಾವಿದರಿರಬೇಕು, ತಂತ್ರಜ್ಞರಿರಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.
'ಆದರೆ ಚಿತ್ರದ ಸ್ಕ್ತ್ರಿಪ್ಟ್ ಪಕ್ಕಾ ಆಗಿದೆ. ಮುಹೂರ್ತಕ್ಕೂ ಮುಂಚೆಯೇ ವಿವರ ನೀಡುವುದು ಬೇಡ ಅಂದುಕೊಂಡಿದ್ದೆ. ಆದರೂ ಸದ್ಯದಲ್ಲೇ ಹೊಸ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ' ಎಂದರು ತಾರಾ.
ಈ ಚಿತ್ರದಲ್ಲಿ ತಾರಾ ಅವರ ಪತಿ ಎಚ್.ಸಿ. ವೇಣು ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರಂತೆ.
ಜುಲೈ ತಿಂಗಳಲ್ಲಿ ಆರಂಭವಾಗಲಿರುವ ಹೊಸ ಚಿತ್ರ ಕಮರ್ಶಿಯಲ್ ಚಿತ್ರವೋ ಅಥವಾ ಆರ್ಟ್ ಚಿತ್ರವೋ ಎನ್ನುವ ಗುಟ್ಟು ಬಿಟ್ಟುಕೊಡದ ತಾರಾ ಸದ್ಯದಲ್ಲೇ ನೋಡಿ ಎಂದು ಹೇಳಿ ನಕ್ಕು ಕುತೂಹಲ ಮೂಡಿಸಿದರು.