ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಲ್ಲುಕಿತ್ತ ಹಾವಿನಂತಾದ ಕೆಎಫ್‌ಸಿಸಿ ಮುಂದೆ 'ಆ ಮರ್ಮ'! (Aa Marma | Dubbing | Coffee Shop | KFCC)
PR
ಒಂದೆಡೆ ಹೊಸಬರ ಚಿತ್ರಗಳು ಸದ್ದು ಮಾಡುತ್ತಿದ್ದರೆ ಮತ್ತೊಂದೆಡೆ ಒಂದಲ್ಲಾ ಒಂದು ವಿವಾದದಲ್ಲೇ ಮುಳುಗೇಳುತ್ತಿದೆ ಕನ್ನಡ ಚಿತ್ರರಂಗ. ಕೆಲವು ಸಿನಿಮಾಗಳು ಗುಣಮಟ್ಟದಿಂದ ಸುದ್ಧಿಯಾಗದೆ ಬರೇ ವಿವಾದಗಳಿಂದಲೇ ಪ್ರಸಿದ್ದಿ ಪಡೆಯುತ್ತಿರುವುದು ವಿಪರ್ಯಾಸ.

ಇಂತಹ ವಿವಾದದ ಸಾಲಿಗೆ ಹೊಸ ಸೇರ್ಪಡೆ 'ಆ ಮರ್ಮ'. ಮೂರು ಭಾಷೆಗಳಲ್ಲಿ ತಯಾರಾಗಿರುವ ಈ ಚಿತ್ರವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲಾಗಿದೆ ಎಂಬುದು ಕೆಎಫ್‌ಸಿಸಿ ಆರೋಪ. ಇಲ್ಲಾ.., ಕನ್ನಡದಲ್ಲಿ ಚಿತ್ರೀಕರಿಸಿ ತಮಿಳು, ತೆಲುಗಿಗೆ ಡಬ್ಬಿಂಗ್ ಮಾಡಿದ್ದೇನೆ ಎಂಬುದು ನಿರ್ಮಾಪಕ ಮಧುಸೂದನ್ ಅವರ ವಾದ.

ಈ ವಿವಾದ ಇಲ್ಲೇ ಇತ್ಯರ್ಥವಾಗುತ್ತೊ ಅಥವಾ 'ಕಾಫಿಶಾಫ್'ನಂತೆ ಕೋರ್ಟ್ ಮೆಟ್ಟಿಲೇರಿ ಕೊನೆಗೊಳ್ಳುತ್ತೋ ಕಾದು ನೋಡೋಣ ಎನ್ನುತ್ತಿದೆ ಗಾಂಧಿನಗರ.

ಇನ್ನು ತಾನೇ ಬಿಡುಗಡೆಯಾಗಬೇಕಿರುವ 'ಆ ಮರ್ಮ' ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಸಾಯಿಕುಮಾರ್, ಥ್ರಿಲ್ಲರ್ ಮಂಜು, ಬಾಲಿವುಡ್ ನಟ ಜಾಕಿ ಶ್ರಾಫ್ ಮುಂತಾದವರು ನಟಿಸಿದ್ದಾರೆ.

ಈಗಾಗಲೇ ಡಬ್ಬಿಂಗ್ ಕುರಿತು ಪ್ರಮುಖ ನಿರ್ಮಾಪಕರು, ನಿರ್ದೇಶಕರು ಚರ್ಚಿಸಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕಾನೂನು ತರಬೇಕು ಎಂಬುದು ಪ್ರಮುಖರ ಒಮ್ಮತವಾದರೂ, ಯಾವ ರೀತಿಯ ಕಾನೂನು ರೂಪಿಸಬೇಕು ಎಂಬುದರ ಬಗ್ಗೆ ಹಲವರಲ್ಲಿ ಭಿನ್ನಾಭಿಪ್ರಾಯವಿದೆ.

ಇವರಲ್ಲಿ ಡಬ್ಬಿಂಗ್ ಬೇಕು ಎನ್ನುವವರು ವ್ಯಾವಹಾರಿಕ ವಾಸ್ತವಾಂಶವನ್ನು ತಿಳಿಹೇಳಿದರೆ, ಡಬ್ಬಿಂಗ್ ಬೇಡ ಎನ್ನುವವರು ಕನ್ನಡ ಭಾಷೆ, ಕಲಾವಿದರ ಅಳಿವು ಉಳಿವಿನ ಪ್ರಶ್ನೆ ಎಂಬಂತಹ ವಾದ ಮಂಡಿಸುತ್ತಿದ್ದಾರೆ.

ಹಾಗಾದರೆ ಡಬ್ಬಿಂಗ್ ಮಾಡುವುದರಿಂದ ಭಾಷೆ ನಾಶವಾಗುವುದೇ..., ಕಲಾವಿದರು ನಿರ್ಗತಿಕರಾಗುತ್ತಾರೆಯೇ... ಸ್ವಮೇಕ್ ಚಿತ್ರ ತೆಗೆಯುವವರೆಲ್ಲ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಿದ್ದಾರೆಯೇ, ಕನ್ನಡ ಕಲಾವಿದರನ್ನೇ ಪೋಷಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಚರ್ಚೆಯಲ್ಲಿ ಎದ್ದಿವೆ.

ಹೋಗಲಿ ಭಾಷೆಯ ಅಳಿವು ಉಳಿವಿನ ಪ್ರಶ್ನೆ ಎನ್ನುವುದಾದರೆ ಎಂತಹ ಭಾಷೆಯನ್ನು ಚಲನ ಚಿತ್ರಗಳಲ್ಲಿ ಬಳಸುತ್ತಿದ್ದೀರಿ, ಕನ್ನಡದ ಶ್ರೇಷ್ಠ ಸಾಹಿತ್ಯ ಆಧಾರಿತ ಚಿತ್ರಗಳು ಇಂದು ಎಷ್ಟು ಬರುತ್ತಿವೆ, ಇಲ್ಲಿ ನಿಜವಾಗಲೂ ಅಡ್ಡಬರುತ್ತಿರುವುದು ಭಾಷೆ ರಕ್ಷಣೆಯ ಪ್ರಶ್ನೆಯಾ ಅಥವಾ ಕೆಲವೇ ಜನರ ಕೈಯಲ್ಲಿ ಬಂಡವಾಳ ಸಂಚಯನವಾಗಬೇಕೆಂಬ ದುರಾಸೆಯಾ ಎಂಬ ಪ್ರಶ್ನೆಗಳೂ ಅಭಿಮಾನಿಗಳಲ್ಲಿ ಎದ್ದಿದೆ.

ವಿವಾದಗಳಿಗೆ ನ್ಯಾಯಾಲಯದಲ್ಲೇ ಅಂತ್ಯ ಕಾಣಲು ಬಯಸುವವರು ಡಬ್ಬಿಂಗ್ ಚಿತ್ರ ಬೇಕೋ ಬೇಡವೋ ಎಂದು ನಿರ್ಧರಿಸಲು ಇವರಿಗೆ ಯಾವ ಅಧಿಕಾರ ಇದೆ ಎಂಬಂತಹ ಪ್ರಶ್ನೆಯನ್ನೂ ಮುಂದಿಡುತ್ತಾರೆ.

ಇತ್ತೀಚೆಗೆ 'ಕಾಫಿ ಶಾಪ್' ಚಿತ್ರ ಕನ್ನಡಕ್ಕೆ ಡಬ್ಬಿಂಗ್ ಮಾಡಲಾಗಿದೆ ಎಂಬ ವಿವಾದ ತಾರಕಕ್ಕೇರಿ ಕೊನೆಗೆ ನ್ಯಾಯಾಲಯದ ತೀರ್ಪಿನ ಮೂಲಕ ಅಂತ್ಯ ಕಂಡಿತು. ಈ ವಿವಾದದಲ್ಲಿ ಡಬ್ಬಿಂಗ್ ಸಂಸ್ಕೃತಿಯನ್ನು ಈ ಹಿಂದಿನಿಂದಲೇ ವಿರೋಧಿಸುತ್ತಾ ಬಂದಿರುವ ಕೆಎಫ್‌ಸಿಸಿ ಹಲ್ಲು ಕಿತ್ತ ಹಾವಿನಂತಾಗಿತ್ತು.

ಈ ಹಿಂದೆ ಡಾ. ರಾಜ್ ಕುಮಾರ್ ಸೇರಿದಂತೆ ಹಿರಿಯ ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ಸಂಸ್ಕೃತಿಯನ್ನು ವಿರೋಧಿಸಿದ್ದರು. ಇತ್ತೀಚೆಗೆ 'ಪುಟ್ಟಕ್ಕನ ಹೈವೆ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಾಗ ಕಲಾವಿದರನ್ನು ಶ್ಲಾಘಿಸಿದ ಸಾಹಿತಿ ಎಸ್.ಎಲ್. ಭೈರಪ್ಪ ಕೂಡ ಡಬ್ಬಿಂಗ್ ಸಂಸ್ಕೃತಿಯನ್ನು ಬಲವಾಗಿ ವಿರೋಧಿಸಿದ್ದರು. ನೀವೇನಂತೀರಿ...?
ಇವನ್ನೂ ಓದಿ