ಪಂಚಭಾಷಾ ನಟಿ ಪ್ರಿಯಾಮಣಿ ಕೊನೆಗೂ ಆರ್. ಚಂದ್ರು ನಿರ್ದೇಶನದ 'ಕೋ ಕೋ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಯಶಸ್ಸಿನ ಹುಡುಗಿ ಸಕ್ಸಸ್ ಹೀರೋ ಶ್ರೀನಗರ ಕಿಟ್ಟಿ ಜೊತೆ ಹೆಜ್ಜೆ ಹಾಕಲು ಸಜ್ಜಾದಂತಾಗಿದೆ.
ಇಷ್ಟಕ್ಕೂ ಪ್ರಿಯಾಮಣಿ ಯಾವುದೇ ಚಿತ್ರವನ್ನು ಸುಲಭದಲ್ಲೇ ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಆದರೆ ನಿರ್ದೇಶಕ ಚಂದ್ರು ಹೆಣೆದಿರುವ ಕಥೆ ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆದ ಪ್ರಿಯಾಮಣಿ 'ಐ ಯಾಮ್ ರೆಡಿ' ಎಂದು ಗ್ರೀನ್ ಸಿಗ್ನಲ್ ಕೊಟ್ಟರಂತೆ.
ಪ್ರಿಯಾಮಣಿ ನಿರ್ಧಾರ 'ಕೋ ಕೋ' ತಂಡಕ್ಕೆ ಎಲ್ಲಿಲ್ಲದ ಖುಷಿ ಉಂಟುಮಾಡಿದೆ. ಕಳೆದೆರಡು ತಿಂಗಳುಗಳಿಂದಲೂ 'ಕೋ ಕೋ' ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದ ನಿರ್ದೇಶಕ ಚಂದ್ರುಗೆ ಅಂತೂ ಇಂತೂ ಸ್ಟಾರ್ ನಟಿಯೇ ಸಿಕ್ಕಂತಾಗಿದೆ.
ಜೂನ್ ನಾಲ್ಕು ಶನಿವಾರ ಪ್ರಿಯಾಮಣಿ ಅವರ ಹುಟ್ಟುಹಬ್ಬ. ಹುಟ್ಟುಹಬ್ಬವನ್ನು ಅವರು 'ಕೋಕೋ' ತಂಡದ ಸಮ್ಮುಖದಲ್ಲೇ ಆಚರಿಸಿಕೊಂಡರು. 'ಚಿತ್ರದ ಕಥೆ ಕೇಳಿದಾಗ ಈ ಚಿತ್ರದ ನನ್ನ ಪಾತ್ರ 'ಪರುತ್ತಿವೀರನ್' ಚಿತ್ರವನ್ನು ನೆನಪಿಸುತ್ತದೆ. ಇಲ್ಲಿ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇರುವುದರಿಂದಲೇ ನಟಿಸಲು ಒಪ್ಪಿ ಸಹಿ ಹಾಕಿದೆ' ಎಂದಿದ್ದಾರೆ ಪ್ರಿಯಾಮಣಿ.
ಪ್ರಿಯಾಮಣಿ ಸದ್ಯ ಶಿವರಾಜ್ ಕುಮಾರ್ ಅಭಿನಯದ 'ಲಕ್ಷ್ಮೀ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಲಕ್ಷ್ಮೀ' ಚಿತ್ರದ ಬಳಿಕ ಅವರು ಜೂನಿಯರ್ ಎನ್.ಟಿ.ಆರ್. ನಾಯಕರಾಗಿರುವ ತೆಲುಗು ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ 'ಲಕ್ಷ್ಮಿ' ಬಳಿಕ 'ಕೋ ಕೋ' ಚಿತ್ರದ ಅಭಿನಯಕ್ಕೆ ತಾನು ಆದ್ಯತೆ ನೀಡುವುದಾಗಿ ಪ್ರಿಯಾಮಣಿ ಸಾರಿರುವುದು ನಿರ್ದೇಶಕ ಚಂದ್ರು ಅವರ ಹುಮ್ಮಸ್ಸನ್ನು ಹೆಚ್ಚಿಸಿದ್ದು ಚಿತ್ರಕ್ಕೆ ಮುಹೂರ್ತ ನಿಗದಿ ಮಾಡಲು ಅವರು ತುದಿಗಾಲ ಮೇಲೆ ನಿಂತಿದ್ದಾರೆ. ರಮಣ ಗೋಕುಲ ನಿರ್ದೇಶನದಲ್ಲಿ ಹಾಡುಗಳ ಧ್ವನಿ ಮುದ್ರಣ ಭರದಿಂದ ಸಾಗಿದೆ.