ಪ್ರಜ್ವಲ್ ಈಗ ಡೈನಾಮಿಕ್ ಪ್ರಿನ್ಸ್ ಆಗಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ 'ಬದ್ರ' ಚಿತ್ರದಲ್ಲಿನ ಪ್ರಜ್ವಲ್‌ಗೆ ನಿರ್ದೇಶಕ ಮಹೇಶ್ ರಾವ್ ಈ ಟೈಟಲ್ ನೀಡಿದ್ದಾರೆ. 'ಬದ್ರ' ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಗ್ರೀನ್ ಹೌಸ್‌ನಲ್ಲಿ ಏರ್ಪಾಡಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್ ರಾವ್, ತೆಲುಗಿನ 'ರಣಂ' ಚಿತ್ರದ ರೀಮೇಕ್ ಆಗಿರುವ 'ಬದ್ರ' ಇಡೀ ಕುಟುಂಬಕ್ಕೆ ಮನರಂಜನೆ ನೀಡುವ ಚಿತ್ರವಾಗಿದ್ದು ರಾಜ್ಯದ ಪರಿಸರಕ್ಕೆ ತಕ್ಕಂತೆ ಮೂಲ 'ರಣಂ' ಕಥೇಯಲ್ಲಿ ಶೇಕಡ 50ರಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ಆಕ್ಷನ್‌ಗೆ ಕೊಟ್ಟ ಮಹತ್ವವನ್ನು ಹಾಸ್ಯಕ್ಕೂ ನೀಡಿದ್ದೇನೆ ಎಂದು ತಿಳಿಸಿದರು.
ತೆಲುಗಿನಲ್ಲಿ ಯಶಸ್ವಿಯಾಗಿರುವ 'ರಣಂ' ಚಿತ್ರವನ್ನು ಅಲ್ಲಿಗಿಂತ ಭಿನ್ನವಾಗಿ ಕನ್ನಡದಲ್ಲಿ 'ಬದ್ರ'ನನ್ನಾಗಿ ಮಾಡಿದ್ದೇನೆ ಎಂದರು ಮಹೇಶ್ ರಾವ್. 'ಬದ್ರ' ಚಿತ್ರಕ್ಕೆ ಶ್ರೀಗುರು ಸಂಗೀತ ನೀಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಮತ್ತು ಗೌಸ್ ಪೀರ್ ತಲಾ ಎರಡು ಹಾಗೂ ಸರ್ವೇಶ್ ಬೀದರ್ ಒಂದು ಹಾಡು ಬರೆದಿದ್ದಾರೆ.
ಎಂ.ಎನ್.ಕೆ.ಮೂವೀಸ್ ಲಾಂಛನದಡಿ ಎಂ.ಎನ್. ಕುಮಾರ್ 'ಬದ್ರ' ಚಿತ್ರವನ್ನು ನಿರ್ಮಿಸಿದ್ದಾರೆ. ಮುಂಬೈ ಬೆಡಗಿ ಡೈಸಿ ಷಾ ಈ ಚಿತ್ರದ ನಾಯಕಿ. 'ಚಿತ್ರದಲ್ಲಿ ಕೊರಿಯೋಗ್ರಫಿ ಭಿನ್ನವಾಗಿದೆ. ನಾನು ಕಲಿಯದ ಸ್ಟೆಪ್ಸ್‌ಗಳಿಗೆಲ್ಲ ಹೆಜ್ಜೆ ಹಾಕುವುದು ಆರಂಭದಲ್ಲಿ ಸ್ವಲ್ಪ ಸಮಸ್ಯೆಯಾಯಿತು. ಆ ಮೇಲೆ ಹೊಂದಿಕೊಂಡೆ' ಎಂದು ಡೈಸಿ ಪ್ರಾಮಾಣಿಕವಾಗಿ ನುಡಿದರು.
ನಾಯಕ ಪ್ರಜ್ವಲ್ ಮಾತನಾಡಿ, 'ಇದು ನನ್ನ ಮೊದಲ ರೀಮೇಕ್ ಚಿತ್ರ. ನನ್ನ ಪಾತ್ರದಲ್ಲಿ ಗಂಭೀರತೆಯ ಜತೆ ಜತೆಗೇ ಹಾಸ್ಯವಿದೆ. ವಿಲನ್ ಜತೆಗಿನ ಸಂಭಾಷಣೆಯಲ್ಲೂ ಹಾಸ್ಯ ಬೆರೆತುಕೊಂಡಿದೆ. ತೀರಾ ಭಿನ್ನ ಅನುಭವ ಕೊಟ್ಟ ಚಿತ್ರವಿದು. ಕುಮಾರ್ ನಮ್ಮ ಫ್ಯಾಮಿಲಿ ಫ್ರೆಂಡ್. ಹಾಗಾಗಿ ಹೋಮ್ ಬ್ಯಾನರ್‌ನಲ್ಲಿ ನಟಿಸಿದಂತೆ ಭಾಸವಾಯಿತು' ಎಂದರು.
ಮಹೇಶ್ ರಾವ್-ಪ್ರಜ್ವಲ್ ಕಾಂಬಿನೇಶನ್‌ನ ಎರಡನೆ ಚಿತ್ರವಿದು. ಮೊದಲ ಸಿನಿಮಾ 'ಮುರಳಿ ಮೀಟ್ಸ್ ಮೀರಾ' ಇತ್ತೀಚೆಗೆ ತೆರೆ ಕಂಡಿದೆ. ಜೊತೆಗೆ ಪ್ರಜ್ವಲ್ ನಾಯಕರಾಗಿರುವ 'ಕೋಟೆ'ಯೂ ಇತ್ತೀಚೆ ತೆರೆ ಕಂಡಿತಾದುದರಿಂದ 'ಬದ್ರ'ನ ಬಿಡುಗಡೆಯನ್ನು ಎಂ.ಎನ್. ಕುಮಾರ್ ಮುಂದೂಡುತ್ತಾ ಬಂದಿದ್ದಾರೆ
ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ 'ಮಂಜಿನ ಹನಿ' ಚಿತ್ರ ರೀಲೀಸ್ ಆದ ನಂತರ 'ಬದ್ರ'ನನ್ನು ತೆರೆಗೆ ತರುವ ಆಲೋಚನೆ ಕುಮಾರ್ ಅವರದ್ದಾಗಿದೆ.