ಕನ್ನಡ ಚಿತ್ರರಂಗದಲ್ಲಿ ಹಿಂದೊಮ್ಮೆ ಭಾರೀ ಪ್ರಸಿದ್ದಿ ಹಾಗೂ ಜನಪ್ರಿಯತೆ ಪಡೆದಿದ್ದ ನಾಯಕಿ ನಟಿ, ಕೃಷ್ಣ ಸುಂದರಿ ಸರಿತಾ ತಮ್ಮ ಎರಡೂ ನೇತ್ರಗಳನ್ನು ಮಂಗಳವಾರ ಬೆಂಗಳೂರಿನಲ್ಲಿ ದಾನ ಮಾಡಿದ್ದಾರೆ. ನಗರದ ನಾರಾಯಣ ನೇತ್ರಾಲಯಕ್ಕೆ ತೆರಳಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
'ನೇತ್ರ ದಾನಕ್ಕೆ ನನಗೆ ವರನಟ ಡಾ. ರಾಜ್ ಕುಮಾರ್ ಅವರೇ ಪ್ರೇರಣೆ' ಎಂದು ಅವರು ಈ ಸಂದರ್ಭದಲ್ಲಿ ವರದಿಗಾರರಿಗೆ ತಿಳಿಸಿದರು.
ಎಂಭತ್ತರ ದಶಕದಲ್ಲಿ ವರನಟ ಡಾ. ರಾಜ್ ಕುಮಾರ್ ಜೊತೆ ಅವರು ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನೆ ಮಾತಾಗಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಸರಿತಾ ಅವರ ವಿಶಿಷ್ಟ ಮುಗುಳ್ನಗೆಯ ಮುಖಾರವಿಂದ, ವಿಶಾಲ ನೇತ್ರ ಎಲ್ಲರನ್ನೂ ಬಲು ಬೇಗ ಆಕರ್ಷಿಸಿತ್ತು. ಜೊತೆಗೆ ಅವರ ಮುಗ್ಧ ಹಾಗೂ ಸಹಜ ಅಭಿನಯ ಶೈಲಿ ಜನಮೆಚ್ಚುಗೆ ಗಳಿಸಿ ಅವರು ಬಹುಬೇಗ ಜನಾದರಣೆಯ ನಟಿಯೆನಿಸಿಕೊಂಡರು.
ಅಂದಿನ ದಿನಗಳಲ್ಲಿ ಡಾ. ರಾಜ್-ಸರಿತಾ ಜೋಡಿ ಪ್ರೇಕ್ಷಕರಲ್ಲಿ ಅಪಾರ ಕ್ರೇಜ್ ಹುಟ್ಟಸಿತ್ತು.
'ವರನಟ ಡಾ. ರಾಜ್ ಅವರ ಜೊತೆ ನಡಿಸುವ ಸದವಕಾಶಗಳು ದೊರಕಿದ್ದೇ ನನ್ನ ಪುಣ್ಯ. ಅವರು ತಮ್ಮ ನೇತ್ರಗಳನ್ನು ದಾನ ಮಾಡಿರುವ ಸಂಗತಿಯನ್ನು ನಾನು ಬಲ್ಲೆ. ಇದೇ ಸ್ಪೂರ್ತಿಯಿಂದ ನಾನು ಇಂದು ನನ್ನ ನೇತ್ರಗಳನ್ನು ದಾನ ಮಾಡುತ್ತಿದ್ದೇನೆ. ನನ್ನ ಎರಡೂ ಕಣ್ಣುಗಳೂ ಅಂಧರ ಬಾಳಿಗೆ ಬೆಳಕಾಗುವುದೇ ನನ್ನ ಜೀವನದ ಭಾಗ್ಯ' ಎಂದು ಸರಿತಾ ಅವರು ಭಾವುಕತೆಯಿಂದ ನುಡಿದರು.