ರೆಬೆಲ್ ಎಂದ ತಕ್ಷಣ ನೆನಪಿಗೆ ಬರುವವರೇ ಅಂಬರೀಷ್. ಅವರು ಎಂಭತ್ತರ ದಶಕದಲ್ಲಿ ರೆಬೆಲ್ ಆಗಿದ್ದುದನ್ನು ಈಗಲೂ ನೆನಪಿಸಿಕೊಳ್ಳುವವರಿದ್ದಾರೆ. ಆ ನಂತರ ಬೆಳ್ಳಿ ತೆರೆಯ ಮೇಲೆ ದೌರ್ಜನ್ಯಗಳ ವಿರುದ್ಧ, ವ್ಯವಸ್ಥೆಯ ವಿರುದ್ಧ ಸೆಟೆದು ನಿಲ್ಲುವ ಪಾತ್ರಗಳನ್ನು ಅನೇಕ ನಟರು ಅಭಿನಯಿಸಿದರೂ ಯಾರಿಗೂ ರೆಬೆಲ್ ಸ್ಟಾರ್ ಅಥವಾ ರೆಬೆಲ್ ಕ್ಯಾಂಡಿಡೇಟ್ ಎಂಬ ಟೈಟಲ್ ಅಥವಾ ಪದವಿ ಸಿಗಲಿಲ್ಲ. ಆದರೆ ಈಗ ಆದಿತ್ಯ ಅಂಥದ್ದೊಂದು ಪದವಿಯನ್ನು ದಕ್ಕಿಸಿಕೊಳ್ಳುತ್ತಿದ್ದಾರೆ.
'ರೆಬೆಲ್' ಎಂಬುದು ಆದಿತ್ಯ ಅಭಿನಯದ ಹೊಸ ಚಿತ್ರದ ಶೀರ್ಷಿಕೆ. ಇದನ್ನು ಅವರ ತಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. 'ರಕ್ತಾಕ್ಷ' ನಂತರ ತಂದೆ-ಮಗ ಒಟ್ಟಾಗುತ್ತಿರುವ ಚಿತ್ರವಿದು. ಚಿತ್ರದ ಕಥೆಯೇನು ಎಂಬುದನ್ನು ಆದಿತ್ಯ ಆಗಲೀ, ಬಾಬು ಅವರಾಗಲೀ ಬಹಿರಂಗಗೊಳಿಸಿಲ್ಲ.
ಚಿತ್ರದ ಹೆಸರು ಕೇಳಿದರೆ ಇದು ವ್ಯವಸ್ಥೆಯ ವಿರುದ್ಧ ಹೋರಾಡುವವನೊಬ್ಬನ ಕಥೆ ಇರಬಹುದೆಂದೆನಿಸಬಹುದು. ಅದು ನಿಜವೋ ಸುಳ್ಳೋ ಎಂದು ತಿಳಿಯಲು ಇನ್ನೂ ಕೆಲವು ದಿನಗಳ ಕಾಲ ಕಾಯಬೇಕಾಗುತ್ತದೆ.
'ರೆಬೆಲ್' ಚಿತ್ರದಲ್ಲಿ ಅಂಬರೀಷ್ ಇರುತ್ತಾರಾ ಎಂಬ ಪ್ರಶ್ನೆಗೆ 'ಅವರು ಇರಬೇಕು ಎಂಬುದೇ ನನ್ನ ವೈಯಕ್ತಿಕ ಆಸೆ' ಎನ್ನುತ್ತಾರೆ ಆದಿತ್ಯ.
ಆದಿತ್ಯ ಇದುವರೆಗೂ ಡಾ. ವಿಷ್ಣುವರ್ಧನ್, ಅಮರೀಶ್ ಪುರಿ, ಮಮ್ಮೂಟ್ಟಿ, ಮೋಹನ್ ಲಾಲ್ ಮುಂತಾದ ಘಟಾನುಘಟಿಗಳ ಜೊತೆಗೆ ಅಭಿನಯಿಸಿದ್ದಾರೆ. ಆದರೆ ಅಂಬರೀಷ್ ಜೊತೆಗೆ ಇದುವರೆಗೂ ಬೆಳ್ಳಿ ಪರದೆಯನ್ನು ಹಂಚಿಕೊಂಡಿಲ್ಲ.
'ಅಂಬರೀಷ್ ಅವರನ್ನು ಚಿಕ್ಕಂದಿನಿಂದಲೂ ನೋಡಿ ಬೆಳೆದವನು ನಾನು. ಅವರ ಜೊತೆ ಒಂದು ಚಿತ್ರದಲ್ಲಾದರೂ ನಟಿಸಬೇಕೆಂಬುದು ನನ್ನ ಹಳೆಯ ಆಸೆ. ಅದರಲ್ಲೂ ಈಗ ಈ ಚಿತ್ರದಲ್ಲಿ ನಟಿಸಿದರೆ ಅದಕ್ಕಿಂತ ಸಂತೋಷ ಬೇರೆ ಏನು?' ಎಂದು ಆದಿತ್ಯ ಅವರು ಅಂಬರೀಷ್ ನಟಿಸುತ್ತಾರೋ, ಇಲ್ಲವೋ ಎಂಬ ಗುಟ್ಟು ಬಿಟ್ಟುಕೊಡದೆ ಪ್ರಸ್ನಿಸುತ್ತಾರೆ.
ಸದ್ಯಕ್ಕೆ 'ಟಿಪ್ಪು' ಚಿತ್ರದಲ್ಲಿ ಬ್ಯುಸಿಯಾಗಿರುವ ಆದಿತ್ಯ 'ಕಾಟನ್ ಪೇಟೆ' ಮತ್ತು 'ಮಾಸ್' ಚಿತ್ರಗಳನ್ನು ಮುಗಿಸಿದ ನಂತರ ಈ 'ರೆಬೆಲ್'ನ ಸ್ಟಾರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.