ದಕ್ಷಿಣ ಭಾರತದ ಹೆಸರಾಂತ ನಟಿ ಮೀರಾ ಜಾಸ್ಮಿನ್ ಸದ್ಯದಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಮೀರಾ ಜಾಸ್ಮಿನ್ ಮದುವೆ ಆದ ನಂತರ ಬಣ್ಣದ ಬದುಕಿಗೆ ಗುಡ್ ಬೈ ಹೇಳಲಿದ್ದಾರೆಂಬ ಮಾತೂ ಕೇಳಿಬರುತ್ತಿದೆ.
ಬಹುಕಾಲದ ಗೆಳೆಯ ಮ್ಯಾಂಡೋಲಿನ್ ವಾದಕ ರಾಜೇಶ್ ಅವರನ್ನು ಮೀರಾ ಜಾಸ್ಮಿನ್ ವಿವಾಹವಾಗಲಿದ್ದಾರೆ. ಮೂಲತಃ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯವರಾದ ರಾಜೇಶ್ ಸಂಪ್ರದಾಯ ಬದ್ಧ ಹಿಂದೂ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದಾರೆ.
ತಮ್ಮ ಹತ್ತು ವರ್ಷಗಳ ಬಣ್ಣದ ಬದುಕಿನಲ್ಲಿ ಮೀರಾ ಜಾಸ್ಮಿನ್ ಹಲವಾರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಮಿಂಚಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರತಿಭಾನ್ವಿತ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೀರಾ ಜಾಸ್ಮಿನ್ ಇತರ ಹಲವು ಪ್ರಶಸ್ತಿಗಳಿಗೂ ಭಾಜನರಾದವರು.
ಚೆಂದುಳ್ಳಿ ಚೆಲುವೆ ಮೀರಾ ಈ ವರ್ಷವೇ ಹಸೆ ಮಣೆಯೇರಲಿದ್ದು ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಕನ್ನಡದಲ್ಲಿ 'ದೇವರು ಕೊಟ್ಟ ತಂಗಿ', 'ಮೌರ್ಯ', 'ಅರಸು', 'ಹೂ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಮೀರಾಗೆ ಇತ್ತೀಚಿನ ದಿನಗಳಲ್ಲಿ ಬಣ್ಣದ ಬದುಕು ಕೈ ಹಿಡಿದಿಲ್ಲವಂತೆ. ಹೀಗಾಗಿ ಹೊಸ ಆಫರ್ ಬಾರದ ಹಿನ್ನೆಲೆಯಲ್ಲಿ ಬಣ್ಣದ ಬದುಕಿಗೆ ಮೀರಾ ವಿದಾಯ ಹೇಳುವರು ಎಂಬ ವದಂತಿ ಹಬ್ಬಿತ್ತು.