'ನಮ್ ಕೃಷ್ಣನ್ ಮ್ಯಾರೇಜ್'ಗೆ ಬರೋಕೆ ಮುಂಚೆ ನಿಮ್ ಮ್ಯಾರೇಜ್ಗೆ ನಾವು ಬರ್ತೇವೆ' ಎಂಬುದಾಗಿ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ತಂಡ ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಇತ್ತೀಚೆಗಷ್ಟೇ ನೀಡಿದ ಈ ಜಾಹೀರಾತಿಗೆ ಅದೆಂಥಾ ಪ್ರತಿಕ್ರಿಯೆ ಸಿಕ್ಕಿದೆಯಂತೆ ಗೊತ್ತಾ? ರಾಜ್ಯದ ಎಲ್ಲೆಡೆಗಳಿಂದ ಸಾವಿರಕ್ಕೂ ಹೆಚ್ಚು ಮದುವೆ ಆಹ್ವಾನ ಪತ್ರಿಕೆಗಳು ಬಂದಿವೆಯಂತೆ. ನಮ್ಮ ಮದುವೆಗೆ ಬನ್ನಿ. ನಮ್ಮೂರಿಗೆ ಬಂದು ಹಾರೈಸಿ. ಎಂದು ಇವರೆಲ್ಲ ಪ್ರತ್ಯೇಕವಾಗಿ ಆಹ್ವಾನಿಸಿದ್ದಾರಂತೆ.
ಇದಕ್ಕೆ ಪ್ರತಿಕ್ರಿಯೆಯಾಗಿ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರದ ತಂಡ ಜೂನ್ ಒಂಭತ್ತರಂದು ಗುರುವಾರ ಸಾಗರದಲ್ಲಿ ಮೂರು ಮದುವೆ ಮನೆಗಳಿಗೆ ಹೋಗಿ ವಧೂ ವರರನ್ನು ಹರಸಿ ಬಂದಿದೆ. ಬರೀ ಸಾಗರವಷ್ಟೇ ಅಲ್ಲ. ನಾಳೆ ಜೂನ್ ಹತ್ತರಂದು ಶಿವಮೊಗ್ಗದಲ್ಲಿ ಒಂದಷ್ಟು ಮದುವೆ ಮನೆಗಳಿಗೆ ಚಿತ್ರ ತಂಡ ಹೋಗಿ ಬರಲಿದೆ. ಅಲ್ಲಿ ಆಯೋಜಿಸಲಾಗಿರುವ ಸಾಮೂಹಿಕ ವಿವಾಹ ಸಮಾರಂಭಕ್ಕೂ ಭೇಟಿ ಕೊಡಲಿದೆ.
ಅಲ್ಲಿಂದ ನಂತರ ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಡ್ಯ, ಮೈಸೂರು, ಹಾಸನ, ತುಮಕೂರು.. ಹೀಗೆ ರಾಜ್ಯದ ಹಲವು ನಗರಗಳಿಗೆ ಚಿತ್ರ ತಂಡ ಹೋಗಿ ಅಲ್ಲೆಲ್ಲಾ ವಧೂ ವರರಿಗೆ ಶುಭ ಹಾರೈಸಿ ಬರುವುದರ ಜೊತೆಗೆ ಚಿತ್ರದ ಪ್ರಚಾರವನ್ನೂ ಮಾಡಲಿದ್ದಾರೆ.
ಈ ವಿನೂತನ ಪ್ರಚಾರ ಕಾರ್ಯಕ್ರಮ ಜೂನ್ 18ರ ವರೆಗೂ ಸಾಗಲಿದೆ. 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರದ ಬಿಡುಗಡೆ ಜುಲೈ ಮೊದಲ ವಾರದಲ್ಲಿ. ಈ ನಡುವಣ ಎರಡು ವಾರಗಳಲ್ಲಿ ಚಿತ್ರದ ತಂಡ ಇನ್ನೂ ಏನೇನು ಹೊಸ ಪ್ರಚಾರ ತಂತ್ರಗಳನ್ನು ತರಲಿದೆಯೋ ಗೊತ್ತಿಲ್ಲ.