ಆರ್. ಚಂದ್ರು ನಿರ್ದೇಶನದ 'ಕೋ ಕೋ' ಚಿತ್ರಕ್ಕೆ ಇದೀಗ ಖದರ್ ನಟರೊಬ್ಬರ ಎಂಟ್ರಿಯಾಗಿದೆ. ಹೆಸರು ಶ್ರೀಹರಿ. ಯಾರು ಶ್ರೀಹರಿ ಎಂಬ ಗೊಂದಲವಿದ್ದರೆ 'ಮಗಧೀರ' ಚಿತ್ರದ ಶೇರ್ ಖಾನ್ ಪಾತ್ರವನ್ನೊಮ್ಮೆ ನೆನಪಿಸಿಕೊಳ್ಳಿ. ಅವರೇ ಶ್ರೀಹರಿ.
ಶ್ರೀಹರಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ಅದರಲ್ಲೂ ಖಳನಟರಾಗಿಯೇ ಹೆಚ್ಚು ಗುರುತಿಸಿಕೊಂಡವರು. ಈ ವರೆಗೆ ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರೀಹರಿ 'ಕೋ ಕೋ'ದಲ್ಲಿ ನಟಿಸಲು ಒಪ್ಪಿರುವುದು ಸದ್ಯಕ್ಕೆ ಗಾಂಧಿನಗರದಲ್ಲಿ ದೊಡ್ಡ ಸುದ್ದಿ.
ತೀರಾ ದುಬಾರಿ ಬೆಲೆಯ ವಿಲನ್ ಎನಿಸಿಕೊಂಡಿರುವ ಶ್ರೀಹರಿ ಅವರನ್ನು ಕನ್ನಡಕ್ಕೆ ಕರೆತರಬೇಕೆಂದು ಚಂದ್ರು ನಡೆಸಿದ ಪ್ರಯತ್ನ ಕೊನೆಗೂ ಫಲ ನೀಡಿದೆ. ಈ ಹಿಂದೆ ಕನ್ನಡಕ್ಕೆ ಬಂದು ಹೋಗಿದ್ದ ಶ್ರೀಹರಿ ಅವರು 'ಕೋ ಕೋ' ಮೂಲಕ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಕನ್ನಡ ಚಿತ್ರದಲ್ಲಿ ನಟಿಸುತ್ತಾರಾ ಎಂಬ ಗುಮಾನಿ ಇಟ್ಟುಕೊಂಡೇ ಅವರಿಗೆ ಕಥೆ ಹೇಳಿದರಂತೆ ಚಂದ್ರು. ಕಥೆ ಕೇಳಿ ಕೆಲ ಹೊತ್ತು ಮೌನವಾಗಿದ್ದ ಶ್ರೀಹರಿ ಒಮ್ಮೆಲೆ ಚಂದ್ರು ಅವರ ಕೈ ಕುಲುಕಿ 'ಎಸ್ ಐ ಯಾಮ್ ರೆಡಿ' ಎಂದು ಗ್ರೀನ್ ಸಿಗ್ನಲ್ ಕೊಟ್ಟರಂತೆ.
ಚಿತ್ರದಲ್ಲಿ ಶ್ರೀಹರಿಗೆ ನೆಗೆಟಿವ್ ಶೇಡ್ ಇರುವ ಪಾತ್ರವಂತೆ. 'ಅದೊಂಥರಾ ಇಂದಿನ ಸ್ಥಿತಿಗತಿಗಳಲ್ಲಿ ನಡೆಸುತ್ತಿರುವ ಭ್ರಷ್ಟಾಚಾರದ ಪಾತ್ರ. ಚಿತ್ರದ ನಾಯಕನನ್ನು ಬಿಟ್ಟರೆ ಶ್ರೀಹರಿ ಅವರೇ ಹೈಲೈಟ್. ಇಲ್ಲಿ ನಾಯಕನಷ್ಟೇ ಖಳನಟನಿಗೂ ಸ್ಕೋಪ್ ಇದೆ ಎಂದಿದ್ದಾರೆ ನಿರ್ದೇಶಕ ಚಂದ್ರು.
ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಹಾಗೂ ಶ್ರೀಹರಿ ಜೊತೆಯಲ್ಲಿ ರಂಗಾಯಣ ರಘು, ರಾಜು ತಾಳಿಕೋಟೆ, ಮಿತ್ರ ಮುಂತಾದವರ ತಾರಾ ಬಳಗವಿರುವ 'ಕೋ ಕೋ' ಜೂನ್ 20ರಂದು ಸೆಟ್ಟೇರಲಿದೆ.